(ಬಾಟಂ) ಸಿರಿಗೆರೆ ಬಳಿ ಲಾರಿ ಟೈರ್‌ ಸಿಡಿದು ಭೀಕರ ಅಪಘಾತ: ನಾಲ್ವರ ಸಾವು

| Published : Jun 16 2024, 01:49 AM IST

(ಬಾಟಂ) ಸಿರಿಗೆರೆ ಬಳಿ ಲಾರಿ ಟೈರ್‌ ಸಿಡಿದು ಭೀಕರ ಅಪಘಾತ: ನಾಲ್ವರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆ ಸಮೀಪದ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಲಾರಿ ಮತ್ತು ಕಾರುಗಳು.

- ರಾ.ಹೆ.48ರ ಚಿಕ್ಕಬೆನ್ನೂರು ಗ್ರಾಮದ ಬಳಿ ಘಟನೆ

- ಗಾಯಾಳುಗಳಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

- ವಾರಾಂತ್ಯ ರಜೆ ಕಳೆಯಲು ಗೋವಾಕ್ಕೆ ಹೊರಟಿದ್ದ ಬೆಂಗಳೂರಿನ ಥಣಿಸಂದ್ರ ನಿವಾಸಿಗಳು

- ಮೂವರು ಸ್ಥಳದಲ್ಲೇ ಸಾವು, ಒಬ್ಬರು ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರು

- ಕಂಟೇನರ್‌ ಲಾರಿ ಹೆದ್ದಾರಿ ತಡೆಗೋಡೆಗೆ ಅಪ್ಪಳಿಸಿ ಚಾಸಿಯಿಂದ ಬೇರ್ಪಟ್ಟ ಎಂಜಿನ್‌, ಕಂಟೇನರ್‌

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಷ್ಟ್ರೀಯ ಹೆದ್ದಾರಿ ೪೮ರ ಚಿಕ್ಕಬೆನ್ನೂರು ಗ್ರಾಮದ ಬಳಿ ಕಂಟೇನರ್‌ ಲಾರಿಯೊಂದರ ಟೈರ್‌ ಸಿಡಿದ ಪರಿಣಾಮ, ಹಿಂದೆ ವೇಗವಾಗಿ ಬರುತ್ತಿದ್ದ ಫಾರ್ಚೂನರ್‌ ಕಾರು ಅಪ್ಪಳಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಮೃತರನ್ನು ಪ್ರಜ್ವಲ್‌ ರೆಡ್ಡಿ (೩೦), ಹರ್ಷಿತಾ (೨೬), ಸೋಹನ್‌ (೨) ಎಂದು ಗುರುತಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ವಿಜಯರೆಡ್ಡಿ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಒಟ್ಟು ೮ ಜನರು ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರೆಲ್ಲರೂ ಬೆಂಗಳೂರಿನ ಥಣಿಸಂದ್ರ ನಿವಾಸಿಗಳು ಎಂದು ಹೇಳಲಾಗಿದೆ. ವಾರಾಂತ್ಯದ ರಜೆ ಕಳೆಯಲು ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದರು. ಶಿಲ್ಪ, ಸ್ವರ್ಣ ಜಾರ್ಜ್‌, ಮಧುಮಿತ ಮತ್ತು ಕೃಷ್ಣ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರದುರ್ಗದ ಕಡೆಯಿಂದ ದಾವಣಗೆರೆ ಮಾರ್ಗವಾಗಿ ಹೆದ್ದಾರಿಯಲ್ಲಿ ಕಂಟೇನರ್‌ ಲಾರಿಯೊಂದು ಚಲಿಸುತ್ತಿತ್ತು. ಈ ವೇಳೆ ಟೈರ್‌ ಸಿಡಿದಿದೆ. ಇದರಿಂದ ಲಾರಿಯ ಹಿಂದೆಯೇ ವೇಗವಾಗಿ ಚಲಿಸುತ್ತಿದ್ದ ಫಾರ್ಚೂನರ್‌ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಮುಂದಿದ್ದ ಲಾರಿಗೆ ಅಪ್ಪಳಿಸಿದೆ. ಲಾರಿ ಮತ್ತು ಕಾರು ಸಂಪೂರ್ಣವಾಗಿ ಜಖಂಗೊಂಡಿವೆ. ಅಪಘಾತದ ರಭಸಕ್ಕೆ ಕಂಟೇನರ್‌ ಲಾರಿಯು ಹೆದ್ದಾರಿ ತಡೆಗೋಡೆಗೆ ಬಲವಾಗಿ ಅಪ್ಪಳಿಸಿದ್ದರಿಂದ ಎಂಜಿನ್‌ ಮತ್ತು ಕಂಟೇನರ್‌ಗಳು ಚಾಸಿಯಿಂದ ಬೇರ್ಪಟ್ಟಿವೆ.

ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಮೀನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭರಮಸಾಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.