ಗದಗ: ಒಂದು ಸಂಸ್ಥೆ ಕಟ್ಟಬೇಕಾದರೆ ಬಹಳ ಶ್ರಮ ಬೇಕಾಗುತ್ತದೆ. ಅದು ನೋಡವವರಿಗೆ ಒಂದು ತರ ಕಂಡರೆ ಕನಸು ಕಟ್ಟುವ ಮನಸ್ಸಿನವರಿಗೆ ಬಹಳ ಕಷ್ಟ ಇರುತ್ತದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕಳಸಾಪುರ ರಸ್ತೆಯಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ವರ್ಷವಿಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ಕಾಳಿದಾಸ ಶಿಕ್ಷಣ ಸಂಸ್ಥೆ ತನ್ನ 25ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವದಕ್ಕೂ ನಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಾವು ಕೇಕ್‌ನಲ್ಲಿರುವ ದೀಪವನ್ನು ಆರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೇವೆ. ಆದರೆ ಕಾಳಿದಾಸ ಶಿಕ್ಷಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರದ ದೀಪವನ್ನು ಹಚ್ಚಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಇಂತಹ ರಜತ ಮಹೋತ್ಸವ ಸಮಾರಂಭದ ಆರಂಭ ಅದ್ಧೂರಿಯಾಗಿ ಜರುಗಿದೆ ಎಂದರು.
ಕಾಲ ಕೆಟ್ಟಿದೆ ಎನ್ನುವ ಜನರಿಗೆ ಒಂದು ಮಾತು. ಈ ಕಾಲದಲ್ಲಿ ಪ್ರತಿದಿನ ಉದಯಿಸುವ ಸೂರ್ಯ, ತಿರುಗುವ ಭೂಮಿ, ಬೀಸುವ ಗಾಳಿ, ಹರಿಯುವ ನೀರು ಇವುಗಳಲ್ಲಿ ಯಾವುದೂ ಕೆಟ್ಟಿಲ್ಲ. ಅದು ಏನಾದರೂ ಕೆಟ್ಟಿದ್ದರೆ ಮನುಷ್ಯನ ಮನಸ್ಸು ಮಾತ್ರ. ಮನುಷ್ಯನ ಜೀವನದಲ್ಲಿ ಎರಡೇ ದಿನಗಳು ಮುಖ್ಯವಾಗಿವೆ. ಒಂದು ತಾಯಿ ಗರ್ಭದಿಂದ ಭೂಮಿಗೆ ಬಂದ ದಿನ. ಇನ್ನೊಂದು ದೇವರು ಪಶು, ಪಕ್ಷಿ, ಪ್ರಾಣಿಗಳಿಂತ ನನ್ನನ್ನು ಏಕೆ ಈ ಭೂಮಿಗೆ ಕಳುಹಿಸಿದ್ದಾನೆ ಎಂದು ಚಿಂತನೆ ಬಂದಾಗ ನಮಗೆ ಅದು ಎರಡನೆಯ ಮರುಜನ್ಮ. ದೇವರು ನಮಗೆ ನೂರು ವರ್ಷ ಆಯುಷ್ಯ ಏಕೆ ನೀಡಿದ್ದಾನೆ ಎಂಬ ಚಿಂತನೆ ಅಗತ್ಯವಾಗಿದೆ ಎಂದರು.ಈ ವೇಳೆ ಎಸ್.ಜಿ. ಪಲ್ಲೇದ, ಬಿ.ಬಿ. ಬಾವಿಕಟ್ಟಿ, ಫಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಬಾನಾಪೂರ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಮುಂತಾದವರು ಇದ್ದರು.ಡಾ. ಜಿ.ಬಿ. ಪಾಟೀಲ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ದೇವರಾಜ ಅರಸು ಹಾಸ್ಟೇಲ್ ಆವರಣದಲ್ಲಿ ಶಶಿಧರ ರೊಳ್ಳಿ ಕುಟುಂಬದವರಿಂದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಪಾದಪೂಜೆ ಕಾರ್ಯಕ್ರಮ ಜರುಗಿತು.