ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಿರೇಕೆರೂರಲ್ಲಿ ಭರದ ಸಿದ್ಧತೆ

| Published : Jan 09 2025, 12:48 AM IST

ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಿರೇಕೆರೂರಲ್ಲಿ ಭರದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಜ. 10 ಮತ್ತು 11ರಂದು ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಯಲಿರುವ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕುರಿತು ಮಾತನಾಡಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಮಾಹಿತಿ ನೀಡಿದ್ದಾರೆ.

ಹಿರೇಕೆರೂರು: ಜ. 10 ಮತ್ತು 11ರಂದು ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಯಲಿರುವ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

ಈ ಕುರಿತು ಮಾತನಾಡಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ, ಪಟ್ಟಣದಲ್ಲಿ ನಡೆಯಲಿರುವ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಸಹಕಾರದಿಂದ ಅತಿ ಸಂಭ್ರಮದಿಂದ ಅಚ್ಚುಕಟ್ಟಾಗಿ ನೆರವೇರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಪೊಲೀಸ್‌ ಮೈದಾನದಲ್ಲಿ ಕಾರ್ಯಕ್ರಮದ ವೇದಿಕೆ ಸಿದ್ಧಗೊಳಿಸುವ ಕಾರ್ಯ ನಡೆಯುತ್ತಿದೆ. ಸುಮಾರು 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ವೇದಿಕೆಯ ಸಮೀಪ 30 ಮಳಿಗೆಗಳನ್ನು ತೆರೆಯಲು ಅನುಕೂಲ ಮಾಡಲಾಗಿದ್ದು, ಅದರಲ್ಲಿ 15 ಪುಸ್ತಕ ಮಳಿಗೆ, ಆರೋಗ್ಯ ಇಲಾಖೆಯಿಂದ ಕ್ಲಿನಿಕ್ ಮತ್ತು ಬ್ಲಡ್ ಬ್ಯಾಂಕ್ ಹಾಗೂ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಎಲ್ಲ ಗೋಷ್ಠಿಗಳಿಗೆ ಬರುವ ಸಾಹಿತಿಗಳಿಗೆ ಆಹ್ವಾನ ಪತ್ರಿಕೆಗಳನ್ನು ತಲುಪಿಸಲಾಗಿದ್ದು, ಅವರು ವೇಳೆಗೆ ಸರಿಯಾಗಿ ಆಗಮಿಸಲು ಗ್ರೂಪ್‌ಗಳನ್ನು ರಚಿಸಿ ಸಂದೇಶಗಳನ್ನು ಕಳುಹಿಸಲಾಗಿದೆ. ಜ. 10ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜ, ಪರಿಷತ್ ಧ್ವಜ ಹಾಗೂ ನಾಡ ಧ್ವಜಾರೋಹಣಗಳೊಂದಿಗೆ ಸಮ್ಮೇಳನ ಪ್ರಾರಂಭವಾಗುವುದು. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಆನಂತರ ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ಸರ್ವಜ್ಞ ವೃತ್ತದ ಮಾರ್ಗವಾಗಿ ಕಾರ್ಯಕ್ರಮದ ಸಭಾ ಮಂಟಪದ ವರೆಗೆ ಸಾರೋಟಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ 5 ಕಲಾ ತಂಡಗಳು, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶಿಕ್ಷಕರು ಸಮವಸ್ತ್ರದೊಂದಿಗೆ ಪಾಲ್ಗೊಳ್ಳುವರು. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲೆಯ ಎಲ್ಲ ತಾಲೂಕುಗಳು, ಇತರ ಜಿಲ್ಲೆಯ ಸಾಹಿತಿಗಳು, ಶಿಕ್ಷಕರು, ಕಲಾವಿದರು, ಸಾಹಿತ್ಯಾಸಕ್ತರು, ಅಜೀವ ಸದಸ್ಯರು, ಎಲ್ಲ ಕನ್ನಡ ಪರ ಸಂಘಟನೆಯವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.

ಕಸಾಪ ಗೌರವ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿಗಳಾದ ಪಿ.ಎಸ್. ಸಾಲಿ, ಎಂ.ಎಂ. ಮತ್ತೂರ, ಹೋಬಳಿ ಘಟಕದ ಅಧ್ಯಕ್ಷ ಬಿ.ಎಸ್. ಪಾಟೀಲ, ಬಿ.ಟಿ. ಚಿಂದಿ, ಕುಮಾರ ಮಡಿವಾಳರ, ಬಸವರಾಜ ಪೂಜಾರ, ರಾಮಣ್ಣ ತೆಂಬದ, ಕುಮಾರ ನಾಯ್ಕರ್, ಅಶೋಕ ಗೊಲ್ಲರ, ಬಿ.ವಿ. ಸೊರಟೂರ, ಎನ್.ಎಸ್. ಚಿಕ್ಕನರುಗುಂದಮಠ, ಸಿ.ಎಸ್. ಚಳಗೇರಿ, ಕೆ.ಟಿ. ಪಾಟೀಲ, ಮನೋಜ ಪಾಟೀಲ ಇದ್ದರು.