ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬೇಂದ್ರೆ ತಮ್ಮ ಕೌಟುಂಬಿಕ ಜೀವನದಲ್ಲಿ ಕಂಡುಕೊಂಡ ಅಪಾರವಾದ ಪ್ರೀತಿ ಹಾಗೂ ತಾವು ಪಟ್ಟ ಪಾಡನ್ನು ಹಾಡಾಗಿಸಿದ್ದು ಆಧುನಿಕ ಕುಟುಂಬಗಳಿಗೆ ಅವರ ದಾಂಪತ್ಯ ಪ್ರೀತಿ ಮಾದರಿಯಾಗಿದೆ ಎಂದು ರಾಘವೇಂದ್ರ ಕುಲಕರ್ಣಿ(ಕುರಾನಾ) ಹೇಳಿದರು.ಅವರು ಬುಧವಾರ ಇಲ್ಲಿನ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಂಘ ಹಾಗೂ ಕನ್ನಡ ವಿಭಾಗ ಡಾ.ದ.ರಾ.ಬೇಂದ್ರೆ ಅವರ 128ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೇಂದ್ರೆ ಕಾವ್ಯ ಗೌರವ, ಕವಿ-ಕಾವ್ಯ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಬೇಂದ್ರೆ ಕಾವ್ಯವನ್ನು ಅಧ್ಯಯನ ಮಾಡಿ ಕುರಾನಾ ಕಾವ್ಯ ನಾಮದಿಂದ ಕವಿತೆ ಬರೆದ ನೆನಪುಗಳನ್ನು ಹಂಚಿಕೊಂಡರು.
ಬೇಂದ್ರೆ ಅವರು ಸಖೀಗೀತ, ನಾದಲೀಲೆ, ನಾಕುತಂತಿ ಇಂತಹ ಕಾವ್ಯಗಳ ಮೂಲಕ ಕನ್ನಡ ಕಾವ್ಯಕ್ಕೆ ಹೊಸ ಬಗೆಯ ಆಧ್ಯಾತ್ಮಿಕ ಲೋಕವನ್ನು ಓದುಗರಿಗೆ ತೆರೆದಿಟ್ಟಿದ್ದಾರೆ. ಮರಾಠಿ ಬಲ್ಲವರಾಗಿದ್ದರೂ ಅಪ್ಪಟ ಧಾರವಾಡದ ಕನ್ನಡ ಭಾಷೆಯನ್ನು ತಮ್ಮ ಕಾವ್ಯಕ್ಕೆ ಬಳಸಿ ಶಬ್ಧ ಗಾರುಡಿಗರೆನಿಸಿಕೊಂಡರು. ಬದುಕಿನ ಸತ್ಯಗಳನ್ನು ಕಂಡು, ಅನುಭವಿಸಿ ಕಾವ್ಯ ರಚಿಸಿದರು. ಬೇಂದ್ರೆ ಬರೆದ ಭಾವಗೀತೆಗಳು ಜನ ಮಾನಸದ ಮೇಲೆ ಇಂದಿಗೂ ಹಚ್ಚ ಹಸಿರಾಗಿವೆ. ವಿದ್ಯಾರ್ಥಿಗಳು ಬೇಂದ್ರೆ ಕಾವ್ಯವನ್ನು ಅಧ್ಯಯನ ಮಾಡಿ ಅವರ ಬದುಕಿನ ಸತ್ಯ ತಿಳಿದುಕೊಳ್ಳಬೇಕು ಎಂದರು.ಆಯ್ಕೆ:
17 ಜನ ವಿದ್ಯಾರ್ಥಿಗಳು ಬೇಂದ್ರೆ ಕಾವ್ಯ ವಾಚನ ಹಾಗೂ ಗಾಯನ ಮಾಡಿದರು. ಅದರಲ್ಲಿ ಪ್ರಥಮ ದಾನಮ್ಮ ಕುಂದರಗಿ, ದ್ವಿತೀಯ ಕೀರ್ತನಾ ಹುಲ್ಯಾಳ, ತೃತೀಯ ಪೂರ್ಣಿಮಾ ಗಿಡವೀರ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಅಧ್ಯಕ್ಷತೆಯನ್ನು ಡಾ.ಎನ್.ವೈ.ಬಡಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ನಾಡಿನ ಕನ್ನಡದ ಆಸ್ತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಡಾ. ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿದರು.ವೇದಿಕೆ ಮೇಲೆ ಡಾ.ಮಂಜಣ್ಣ ಪಿ., ಡಾ.ಸುರೇಖಾ ಯಂಡಿಗೇರಿ, ವಿಶ್ರಾಂತ ಪ್ರಾಧ್ಯಾಪಕ ಎಂ.ಪಿ.ನೀಲಕಂಠಮಠ, ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ, ಡಾ ನಾಗೇಂದ್ರ, ಡಾ.ಚಿದಾನಂದ ನಂದಾರ, ಮಾರುತಿ ಬೋಳಿ, ಚನ್ನದಾಸರ, ಗಾಯತ್ರಿ ಕಲ್ಯಾಣಿ, ಹಾವರಗಿ ಹಾಗೂ ಇತರರು ಇದ್ದರು. ಅನಿತಾ ಹುನಗುಂದ ನಿರೂಪಿಸಿದರು. ದಾನಮ್ಮ ಕುಂದರಗಿ ವಂದಿಸಿದರು.