ಮದುವೆಯಾಗು ಅಂದವಳ ಮಸಣಕ್ಕಟ್ಟಿದ ಪ್ರೇಮಿ!

| Published : Jul 26 2024, 01:32 AM IST

ಸಾರಾಂಶ

ಆನಂದಪುರ ಎಲ್ಲಿಗೆ ಸಮೀಪದ ಮುಂಬಾಳ್ ಮದ್ಲೇ ಸರ ಗ್ರಾಮದ ಹೋಗುವ ರಸ್ತೆಯ ಬದಿಯಲ್ಲಿ ಕೊಲೆ ಮಾಡಿ ಹೂತಿಟ್ಟ ಸೌಮ್ಯಳ ದೇಹವನ್ನು ಅಧಿಕಾರಿಗಳ ನೇತೃತ್ವದಲ್ಲಿ ಹೊರ ತೆಗೆಯಲಾಯಿತು.

ಕನ್ನಡಪ್ರಭ ವಾರ್ತೆ ಆನಂದಪುರ

ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯನ್ನು ಪ್ರಿಯಕರನೇ ಕೊಲೆ ಮಾಡಿ ಹೂತು ಹಾಕಿದ ಘಟನೆ ಸಾಗರ ತಾಲೂಕಿನ ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಲುವೆಯಲ್ಲಿ ಹೂತು ಹಾಕಿದ್ದ ಶವವನ್ನು ಗುರುವಾರ ಪೊಲೀಸರು ಹೊರ ತೆಗೆದಿದ್ದಾರೆ.

ತಾಳಗುಪ್ಪ ಮೂಲದ ಸೃಜನ್ ಕೊಲೆ ಮಾಡಿದ ಆರೋಪಿಯಾಗಿದ್ದು, ಕೊಪ್ಪ ಮೂಲದ ಸೌಮ್ಯ(24) ಕೊಲೆಯಾದ ಯುವತಿ.

ಮೇಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೃಜನ್‌ ಹಾಗೂ ಸೌಮ್ಯ ಇಬ್ಬರ ನಡುವೆ ಪರಿಚಯ ಬೆಳೆದು ಪರಿಚಯ ಪ್ರೀತಿವರೆಗೆ ಮುಂದುವರೆದಿತ್ತು. ಬಳಿಕ ಪ್ರೀತಿ ಮದುವೆವರೆಗೆ ಬಂದು ನಿಂತಿತ್ತು. ಹೀಗಾಗಿ ನನ್ನನ್ನು ಮದುವೆಯಾಗು ಎಂದು ಸೌಮ್ಯ ಸೃಜನ್‌ ಬಳಿ ಹಲವು ಬಾರಿ ಗಲಾಟೆ ಮಾಡಿದ್ದಳಂತೆ.

ಜು.2ರಂದು ಸೌಮ್ಯ ಸಾಗರದಲ್ಲಿರುವ ಸೃಜನ್‌ ಮನೆ ಬಳಿ ಬಂದು ಗಲಾಟೆ ಮಾಡಿದ್ದಾಳೆ. ಗಲಾಟೆ ವಿಕೋಪಕ್ಕೆ ಹೋದಾಗ ಸೃಜನ್‌ ಸೌಮ್ಯಳನ್ನು ಕೊಲೆ ಮಾಡಿ ಆನಂದಪುರದ ಬಳಿಯ ಮದ್ಲೆಸರ ಬಳಿಯ ರೈಲ್ವೆ ಹಳಿ ಬಳಿ ಹೂತಿಟ್ಟಿದ್ದ.

ಶವ ಹೊರತೆಗೆದ ಪೊಲೀಸರು:

ಯುವತಿ ಶವ ಹೂತಿಟ್ಟಿದ್ದ ಸ್ಥಳಕ್ಕೆ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಭೇಟಿ ನೀಡಿ ಆರೋಪಿಯನ್ನು ಕರೆತಂದು ಸ್ಥಳ ಮಹಜರು ಮಾಡಿ ಸಾಗರ ಎಸಿ ಆರ್. ಯತೀಶ್, ಸಾಗರ ತಹಶಿಲ್ದಾರ್ ಚಂದ್ರಶೇಖರ್ ಸಮ್ಮುಖದಲ್ಲಿ ಸೌಮ್ಯ ಮೃತದೇಹದ ಹೊರ ತೆಗೆಯಲಾಯಿತು.

ಶವ ಹೊರ ತೆಗೆಯುತ್ತಿದಂತೆ ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಗಾಗ್ಗೆ ಸುರಿಯುತ್ತಿದ್ದ ಮಳೆ ಕೆಲ ಕಾಲ ಕಾರ್ಯಾಚರಣೆಗೆ ಅಡ್ಡಿ ಯಾಗಿತ್ತು. ರಿಪ್ಪನ್ ಪೇಟೆ ಪೊಲೀಸರಿಂದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕೊಲೆಯಾದ ಯುವತಿಯ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು. ಕಂದಾಯ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇದ್ದರು.ಹೂತಿಟ್ಟ ಜಾಗಕ್ಕೆ 2 ಭಾರಿ ಸೃಜನ್ ಭೇಟಿ

ಸೌಮ್ಯಳ ಮೃತದೇಹವನ್ನು ಹೂತು ಹಾಕಿದ್ದ ಸ್ಥಳಕ್ಕೆ ಸೃಜನ್ ಮಾರನೇ ದಿನ ಭೇಟಿ ನೀಡಿದ್ದಾನೆ. ತನ್ನ ಮೇಲೆ ಅನುಮಾನ ಬರದ ರೀತಿ ವಾಪಸ್ಸಾಗಿದ್ದಾನೆ. ಮೊನ್ನೆ ಶನಿವಾರ ಕೂಡ ಶವ ಹೂತಾಕಿದ್ದ ಜಾಗಕ್ಕೆ ಬಂದು ಹೋಗಿದ್ದಾನೆ. ಕೊಲೆ ಮಾಡಿ 20 ದಿನ ಕಳೆದರೂ ಆತ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವರ್ತಿಸುತ್ತಿದ್ದ.

ಜುಲೈ 2ರಂದು ಮನೆಯಿಂದ ಹೋಗಿದ್ದ ಸೌಮ್ಯ ಮಾರನೇ ದಿನವಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಸೌಮ್ಯ ಕುಟುಂಬಸ್ಥರು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೌಮ್ಯಳ ಮೊಬೈಲ್ ಸಿಡಿಆರ್ ಅನಾಲಿಸಿಸ್ ಮಾಡಿದ ಕೊಪ್ಪ ಪೊಲೀಸರಿಗೆ ಸುಜನ್ ಮೇಲೆ ಬಲವಾದ ಅನುಮಾನ ಮೂಡಿತ್ತು. ಸುಜನ್‌ಗೆ ಕೊಪ್ಪ ಎಎಸ್‌ಐ ಬಸವರಾಜ್ ಠಾಣೆಗೆ ಬರುವಂತೆ ಸೂಚಿಸಿದಾಗ, ತನ್ನ ಭಾವನೊಂದಿಗೆ ಕೊಪ್ಪಕ್ಕೆ ಬಂದು ಸ್ಟೇಟ್‌ಮೆಂಟ್ ಕೊಟ್ಟು ಸಾಗರಕ್ಕೆ ವಾಪಸ್ಸಾಗಿದ್ದ. ತನಿಖೆಯ ಆಳಕ್ಕೆ ಇಳಿದ ಪೊಲೀಸರಿಗೆ ಸುಜನ್‌ ಕೊಲೆಗಾರ ಅಂತಾ ಗೊತ್ತಾಗಿದೆ. ಆಗ ಆತನನ್ನು ಪುನಃ ತನಿಖೆಗೆ ಒಳಪಡಿಸಿದಾಗ ಪೊಲೀಸರ ಮಂದೆ ಸತ್ಯ ಬಾಯಿಬಿಟ್ಟಿದ್ದಾನೆ.

ಬೇರೊಬ್ಬ ಯುವತಿಯೊಟ್ಟಿಗೆ ಸಲುಗೆ ಸಹಿಸದಾದ ಸೌಮ್ಯ

ಇತ್ತೀಚೆಗೆ ಸಾಗರಕ್ಕೆ ಸೃಜನ್‌ ವರ್ಗಾವಣೆಗೊಂಡಿದ್ದ ಕೊಪ್ಪದಿಂದ ಸಾಗರ, ತೀರ್ಥಹಳ್ಳಿಗೆ ಯುವತಿ ಬರುತ್ತಿದ್ದಳು. ಸಾಗರಕ್ಕೆ ಯುವತಿ ಬಂದು ಹೋಗುತ್ತಿದ್ದಳು. ಸೃಜನ್‌ಗೆ ಬೇರೆ ಹುಡುಗಿ ಜೊತೆ ಸಲುಗೆ ಬೆಳೆದಿತ್ತು. ಈ ವಿಚಾರದಿಂದ ಯುವತಿಗೆ ಕೋಪ ಬಂದಿತ್ತು. ಜುಲೈ 2ಕ್ಕೆ ಸಾಗರಕ್ಕೆ ಯುವತಿ ಬಂದಿದ್ದಳು. ಸಾಗರದಿಂದ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಿಪ್ಪನ್‌ಪೇಟೆ ಬಳಿ ಯುವತಿಯನ್ನು ಇಳಿಸಿ ‘ನಿಮ್ಮ ಮನೆಗೆ ಹೋಗು’ ಎಂದಿದ್ದ ದಾರಿಯುದ್ದಕ್ಕೂ ಜಗಳ ಮಾಡಿಕೊಂಡು ಬಂದಿದ್ದಾರೆ. ಆ ವೇಳೆ ಯುವಕ ಕೋಪದಿಂದ ಯುವತಿಗೆ ಹೊಡೆದಿದ್ದಾನೆ. ಯುವತಿ ಕೆಳಗೆ ಬಿದ್ದಿದ್ದಾಳೆ ನಂತರ ಕಾಲಿನಿಂದ ಕುತ್ತಿಗೆಗೆ ತುಳಿದಿದ್ದಾನೆ. ಯುವತಿ ಸಾವನ್ನಪ್ಪಿದ ನಂತರ ಸಾಗರಕ್ಕೆ ಬಂದು ಕಾರು ತಂದಿದ್ದಾನೆ. ಕಾರಲ್ಲಿ ಮೃತದೇಹ ತಂದು ಜಲ ಜೀವನ್ ಕಾಮಗಾರಿಯ ಕಾಲುವೆಯಲ್ಲಿ ಹೂತಿಟ್ಟಿದ್ದ. ಈಗ ಕುಟುಂಬಸ್ಥರು, ಎಸಿ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆಯಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ ತಿಳಿಸಿದರು.