ಗೋವಿಂದ ನಾಮಸ್ಮರಣೆಯಲ್ಲಿ ಸಾಗಿದ ವೈಭವದ ಪುಷ್ಪಪಲ್ಲಕ್ಕಿ ಉತ್ಸವ

| Published : Mar 20 2025, 01:18 AM IST

ಸಾರಾಂಶ

ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ೯೦ನೇ ವರ್ಷದ ಪುಷ್ಪ ಪಲ್ಲಕ್ಕಿ ಉತ್ಸವವು ಭಕ್ತರ ಗೋವಿಂದ ನಾಮಸ್ಮರಣೆಯಿಂದ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್

ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ೯೦ನೇ ವರ್ಷದ ಪುಷ್ಪ ಪಲ್ಲಕ್ಕಿ ಉತ್ಸವವು ಭಕ್ತರ ಗೋವಿಂದ ನಾಮಸ್ಮರಣೆಯಿಂದ ಅದ್ಧೂರಿಯಾಗಿ ನಡೆಯಿತು.

ಮಂಗಳವಾರ ರಾತ್ರಿ ೧೧ ಗಂಟೆಗೆ ಪ್ರಾರಂಭವಾದ ಪುಷ್ಪ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಮೊದಲಿಯಾರ್ ಸಮುದಾಯದವರು ನಡೆಸಿಕೊಟ್ಟರು, ಶ್ರೀ ಲಕ್ಷ್ಮೀವೆಂಕಟರಮಣ ಜಾತ್ರೆಯ ೧೧ನೇ ದಿನದಂದು ನಡೆಯುವ ಪುಷ್ಪಪಲ್ಲಕ್ಕಿ ಉತ್ಸವದ ಜೊತೆಗೆ ತಾಲೂಕಿನ ವಿವಿಧೆಡೆಯಿಂದ ೧೫ಕ್ಕೂ ಹೆಚ್ಚು ದೇವತೆಗಳ ಮೆರವಣಿಗೆಯೂ ನಗರದ ಗೀತಾ ರಸ್ತೆ, ಸೂರಜ್‌ ಮಹಲ್‌ ವೃತ್ತ, ಗಾಂಧಿವೃತ್ತ, ಪಿರ್ಚ್ಚಡ್ ರಸ್ತೆ ಮೂಲಕ ಸತತ ೧೫ ಗಂಟೆಗಳ ಕಾಲ ಸಹಸ್ರಾರು ಭಕ್ತರೊಂದಿಗೆ ನಡೆಯಿತು. ೨೦೦ಕ್ಕೂ ಹೆಚ್ಚು ಭಕ್ತರ ಹೆಗಲ ಮೇಲೆ ಹೊತ್ತು ಸಾಗುವ ಪಲ್ಲಕ್ಕಿ:

ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ೧೧ನೇ ದಿನದ ಉತ್ಸವಕ್ಕೆ ಮಲ್ಲಿಗೆ, ಕನಕಾಂಬರ ಸೇರಿ ವಿವಿಧ ಬಗೆಯ ಸುಮಾರು ಎರಡು ಟನ್ ಹೂವುಗಳಿಂದ ಪುಷ್ಪಪಲ್ಲಕ್ಕಿಯನ್ನು ಜೋಡಿಸಿರುವುದು ವಿಶೇಷವಾಗಿತ್ತು. ಅದರಲ್ಲೂ ೫ ರಿಂದ ೬ ಟನ್ ತೂಕವುಳ್ಳ ಪುಷ್ಪಪಲ್ಲಕ್ಕಿಯನ್ನು ಭಕ್ತರು ಗೋವಿಂದ.. ಗೋವಿದ.. ಎಂಬ ನಾಮಸ್ಮರಣೆ ಮಾಡುತ್ತಾ ಹೆಗಲಮೆಲೆ ಹೊತ್ತು ಸಾಗುವ ದೃಶ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತ್ತು.

ಪುಷ್ಪ ಪಲ್ಲಕ್ಕಿ ಉತ್ಸವ ಹಿನ್ನೆಲೆ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ವಿವಿಧ ಬಗೆ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.

ಮೊದಲಯಾರ್ ಸಮುದಾಯದವರ ವತಿಯಿಂದ ದೇವಾಲಯದಲ್ಲಿ ಅಭಿಷೇಕ, ಹೋಮ ಹವನಗಳ ನಂತರ ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿಯ ವಿಶೇಷ ಪೂಜೆ ನಡೆಯಿತು.

ಲಕ್ಷಾಂತರ ಭಕ್ತರ ಆಗಮನ:

ಈ ಬಾರಿ ನಡೆದ ಹೂವಿನ ಪಲ್ಲಕ್ಕಿ ಮಹೋತ್ಸವಕ್ಕೆ ತಮಿಳುನಾಡು, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿ ಪಲ್ಲಕ್ಕಿಯ ವೈಭವವನ್ನು ಕಣ್ಣುತುಂಬಿಕೊಂಡರು.

ಲಕ್ಷಾಂತರ ಭಕ್ತರು ಸೇರಿದ್ದರಿಂದ ರಸ್ತೆಯಲ್ಲಿ ಕಾಲಿಡಲು ಸಹ ಸಾಧ್ಯವಾಗದಷ್ಟು ಜನದಟ್ಟಣೆ ಕಂಡು ಬಂತು. ಜಾತ್ರೆ ಹಿನ್ನೆಲೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತ ರಾಜ್ಯಗಳಿಂದ ವಿವಿಧ ವ್ಯಾಪಾರಸ್ಥರು ಆಗಮಿಸಿದ್ದರಿಂದ ನಾಗರಿಕರು ತಮಗೆ ಬೇಕಾದ ವಸ್ತುಗಳ ಖರೀದಿಯ ಭರಾಟೆಯೂ ಜೋರಾಗಿತ್ತು. ರಸ್ತೆಯುದ್ದಕ್ಕೂ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ಎಸ್ಪಿ ಶಾಂತರಾಜು ಮಾರ್ಗದರ್ಶನದಲ್ಲಿ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.