ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಶ್ರೀ ಆಲದ ಮರದಮ್ಮ ದೇವಿ ದೇವರುಗಳ ರಂಗದ ಹಬ್ಬದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕಾಲಭೈರವೇಶ್ವರ ಸ್ವಾಮಿ ಶ್ರೀ ಆಲದ ಮರದಮ್ಮ ದೇವಿ ದೇವರ ರಂಗದ ಹಬ್ಬದ ಅಂಗವಾಗಿ ಸಂಪ್ರದಾಯದಂತೆ ಮಾರ್ಚ್ 8 ಭಾನುವಾರದಿಂದ ಮಾರ್ಚ್ 22ವರೆಗೆ 15 ದಿನಗಳು ಗ್ರಾಮಸ್ಥರಿಂದ ರಂಗ ಕುಣಿತ ಪ್ರತಿನಿತ್ಯ ನಡೆಯಿತು. ಮಾರ್ಚ್ 23ರ ಸೋಮವಾರ ಬೆಳಗ್ಗೆ ಗ್ರಾಮದ ಕಾಲಭೈರವೇಶ್ವರ ಮತ್ತು ಶ್ರೀ ಆಲದ ಮರದಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರೆವೇರಿದವು. ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜಿಸುತ್ತಿದ್ದ ಕಂಬಗಳನ್ನು ರಂಗದ ಹಬ್ಬದ ಕೊನೆಯ ದಿನದಂದು ಗ್ರಾಮ ದೇವತೆಯ ಉತ್ಸವದೊಂದಿಗೆ ರಂಗ ಕುಣಿತ ನಡೆಸಿ ರಂಗ ಕುಣಿತಕ್ಕೆಂದು ತರಲಾಗಿದ್ದ ಕಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಕಲ್ಯಾಣಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ನೀರಿಗೆ ಬಿಡಲಾಯಿತು.ರಂಗದ ಹಬ್ಬದ ಅಂಗವಾಗಿ ಗ್ರಾಮದ ರಾಜಭೀದಿಗಳಲ್ಲಿ ದೇವರ ಉತ್ಸವದೊಂದಿಗೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಭಾನುವಾರ ರಾತ್ರಿ ದೊಡ್ಡಬಳ್ಳಾಪುರದ ದಿನ್ನೆ ಆಂಜನೇಯ ಸ್ವಾಮಿ ಪ್ರತ್ಯಂಗಿರಾ ಮಹಾಕಾಳಿ ಬಸವ ಸಂಗಮ ಕ್ಷೇತ್ರ ತಿರುಮಗೊಂಡನಹಳ್ಳಿ ಬಸವಣ್ಣನವರ ವಿಶೇಷ ಉತ್ಸವ ಗ್ರಾಮದಲ್ಲಿ ನೆರವೇರಿತು. ಚಿಂತನ ಯಕ್ಷಗಾನ ಬಳಗ ಸಾಗರ ತಂಡದವರಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.ಶ್ರೀ ಆಲದ ಮರದಮ್ಮ ಸಂಘ ಶ್ರೀ ಕೆಂಪೇಗೌಡ ಗೆಳೆಯರ ಬಳಗ ಶ್ರೀ ಕಾಲಭೈರವೇಶ್ವರ ಸ್ವಾಮಿ ಸಂಘದ ವತಿಯಿಂದ ರಂಗದ ಹಬ್ಬದ ಪ್ರಯುಕ್ತ ಪ್ರತಿದಿನ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ವಿವಿಧ ಉತ್ಸವಗಳನ್ನು ಸಂಘಗಳ ವತಿಯಿಂದ ಆಯೋಜಿಸಲಾಗಿತ್ತು.ರಂಗ ಕುಣಿತಕ್ಕೆ ಹೆಜ್ಜೆ ಹಾಕಿದ ಗ್ರಾಮಸ್ಥರು:

ಸಂಪ್ರದಾಯವನ್ನು ಉಳಿಸಿ ಬೆಳೆಸುವ ಸಲುವಾಗಿ ನೂರಾರು ವರ್ಷಗಳಿಂದ ಗ್ರಾಮದಲ್ಲಿ ರಂಗ ಕುಣಿತ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ. ಕಳೆದ 15 ದಿನಗಳು ಬಹಳ ಶ್ರದ್ದಾ ಭಕ್ತಿಯಿಂದ ಗ್ರಾಮಸ್ಥರು ರಂಗ ಕುಣಿತದಲ್ಲಿ ಪಾಲ್ಗೊಂಡರು. ಚಿಕ್ಕ ಮಕ್ಕಳು ಸೇರಿದಂತೆ ವಯೋ ವೃದ್ಧರೂ ಕೂಡ ರಂಗ ಕುಣಿತದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜೊತೆಗೆ ರಂಗ ಕುಣಿಯುವ ದೇವಾಲಯದ ಆವರಣದಲ್ಲಿ ಪಾದರಕ್ಷೆ ಸೇರಿದಂತೆ ಗ್ರಾಮದಲ್ಲಿ ಮಾಂಸ ಸೇವನೆಯನ್ನು ತ್ಯಜಿಸುವ ಮೂಲಕ ಬಹಳ ಕಟ್ಟುನಿಟ್ಟಾಗಿ ಸಂಪ್ರದಾಯವನ್ನು ಪಾಲಿಸುವ ಮೂಲಕ ರಂಗ ಕುಣಿತ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತಾ ಬರುತ್ತಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ತೋಪೇಗೌಡ ಮಾತನಾಡಿ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ರಂಗದ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತ ಬರಲಾಗುತ್ತಿದೆ ಎಂದರು.ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್‌ ಮಾತನಾಡಿ, ಕಳೆದ 15 ದಿನಗಳಿಂದ ಗ್ರಾಮದಲ್ಲಿ ರಂಗ ಕುಣಿತವನ್ನು ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಪ್ರತಿನಿತ್ಯ ಸಂಜೆ ವೇಳೆಯಲ್ಲಿ ದೇವರಿಗೆ ವಿಶೇಷ ಪೂಜೆಯೊಂದಿಗೆ ರಂಗ ಕುಣಿತ ಮಾಡಲಾಗುತ್ತಿದೆ ಎಂದರು. ನಿವೃತ್ತ ಬಿಸಿಎಂ ವಾರ್ಡನ್‌ ಮಹೇಶ್ ಮಾತನಾಡಿದರು.ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಆಶಾದೇವಿ ಪ್ರಕಾಶ್, ತೋಪೇಗೌಡ, ಚಂದ್ರೇಗೌಡ, ದೇವರಾಜ್, ನಾಗಮಣಿ ಪ್ರಕಾಶ್, ವೆಂಕಟೇಶ್, ಕೃಷ್ಣೇಗೌಡ, ರಂಗೇಗೌಡ, ಶ್ರೀನಿವಾಸ್, ಮುಖಂಡರಾದ ವಾರ್ಡನ್ ಮಹೇಶ್, ವೆಂಕಟೇಶ್, ರಂಗಸ್ವಾಮಿ, ಪ್ರಕಾಶ್, ನಾಗೇಶ್, ಶಿವ ಸ್ವಾಮಿ, ಶಂಕರೇಗೌಡ, ಶಶಿಕಲಾ, ಗುಡಿಗೌಡ್ರು ಉಮೇಶ್, ಪಟೇಲ್ ಶಂಕರೇಗೌಡ, ಬಿಜೆಪಿ ಶಂಕರಣ್ಣ, ಗ್ರಾಮದ ಎಲ್ಲಾ ಸಂಘಗಳ ಸದಸ್ಯರು ಹುಲಿಕೆರೆ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಗ್ರಾಮಸ್ಥರು ರಂಗದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

=====

ಫೋಟೋ:


ನುಗ್ಗೇಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಶ್ರೀ ಆಲದ ಮರದಮ್ಮ ದೇವಿ ದೇವರುಗಳ ರಂಗದ ಹಬ್ಬದ ಪ್ರಯುಕ್ತ ದೊಡ್ಡಬಳ್ಳಾಪುರ ಬಸವಣ್ಣನವರ ಅದ್ದೂರಿ ಉತ್ಸವ ನಡೆಯಿತು.