ನುಡಿದಂತೆ ನಡೆದಾಗ ಮಹಾತ್ಮನಾಗುವ ಮನುಷ್ಯ: ರಾಘವೇಶ್ವರ ಭಾರತೀ ಸ್ವಾಮಿಗಳು

| Published : Dec 15 2024, 02:00 AM IST

ಸಾರಾಂಶ

ಪ್ರತಿವರ್ಷ ರಥಯಾತ್ರೆ ನಡೆಸಿಯೇ ದತ್ತಜಯಂತಿ ಆಚರಿಸಬೇಕು. ಪರ್ವ ಕಾಲದಲ್ಲಿ ನಾವು ಸ್ವಾರ್ಥವನ್ನು, ಕ್ಷುಲ್ಲಕ ಭಾವವನ್ನು ತ್ಯಜಿಸುವ ಸಂಕಲ್ಪ ಮಾಡಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು.

ಯಲ್ಲಾಪುರ: ಗುರುವಾಣಿ ಸತ್ಯವಾಗಲೇಬೇಕು. ಅದು ಭಕ್ತರ ಮೂಲಕ. ಮನುಷ್ಯನಾದವ ನುಡಿದಂತೆ ನಡೆಯಬೇಕು. ಆಗ ಮಹಾತ್ಮನಾಗುತ್ತಾನೆ. ಇವೆಲ್ಲದಕ್ಕೂ ತ್ರಿಮೂರ್ತಿ ಸ್ವರೂಪನಾದ ದತ್ತಗುರುವಿನ ಅನುಗ್ರಹವಾದಾಗ ಸಕಲವೂ ಸಿದ್ಧಿಸುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.

ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಮಂದಿರ ಮತ್ತು ದತ್ತಾತ್ರೇಯ ದೇವರ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠೆ ನೆರವೇರಿಸಿ, ಶನಿವಾರ ದತ್ತ ಜಯಂತಿಯಂದು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಳೆದ ವರ್ಷದ ದತ್ತ ಜಯಂತಿಯಂದು ನಾವು ಇಂದಿನ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಬೇಕು ಎಂದು ಸಂಕಲ್ಪಸಿ, ಘೋಷಿಸಿದ್ದೆವು. ಗುರುವಾಣಿಯನ್ನು ಸತ್ಯ ಮಾಡಿದ ಶಿಷ್ಯರ, ಭಕ್ತರ ಶ್ರಮ ಅನನ್ಯವಾದದ್ದು. ಆದರೆ ಮಠದಿಂದ ಆರ್ಥಿಕ ಅಪೇಕ್ಷೆ ಪಡೆಯದೇ ಯಲ್ಲಾಪುರದ ಭಕ್ತರೇ ಇಲ್ಲಿ ಭವ್ಯ ಗುಡಿಯನ್ನು ದಾನಿಗಳಿಂದ ಸಂಗ್ರಹಿಸಿ, ನಿರ್ಮಿಸಿದ್ದಾರೆ. ಈ ಕ್ಷೇತ್ರವನ್ನು ಗಮನಿಸಿದರೆ ಭವಿಷ್ಯತ್ತಿನಲ್ಲಿ ಗಣಗಾಪುರದ ಕ್ಷೇತ್ರಕ್ಕಿಂತಲೂ ದೊಡ್ಡ ಕ್ಷೇತ್ರವಾಗಿ ಅಲ್ಲಿನ ಜನರೇ ಇಲ್ಲಿ ಬರುವಂತಾದೀತು. ಪ್ರತಿವರ್ಷ ರಥಯಾತ್ರೆ ನಡೆಸಿಯೇ ದತ್ತಜಯಂತಿ ಆಚರಿಸಬೇಕು. ಪರ್ವ ಕಾಲದಲ್ಲಿ ನಾವು ಸ್ವಾರ್ಥವನ್ನು, ಕ್ಷುಲ್ಲಕ ಭಾವವನ್ನು ತ್ಯಜಿಸುವ ಸಂಕಲ್ಪ ಮಾಡಬೇಕು ಎಂದರು.

ಅಮೃತಸಿದ್ಧಿ ಯೋಗದ ಸಂದರ್ಭದಲ್ಲಿ ದತ್ತಮೂರ್ತಿಯ ಪ್ರತಿಷ್ಠೆ ನೆರವೇರಿದೆ. ಇದು ಅಮೃತವೂ, ಸಿದ್ಧಿಯೂ ಇರುವ ಕ್ಷೇತ್ರವಾಗಿ ಬೆಳೆಯಲಿದೆ. ಇದು ಕೇವಲ ಯಲ್ಲಾಪುರದ ಮಂದಿರವಲ್ಲ, ಎಲ್ಲ ಪುರಗಳ ಭಕ್ತರ ಮಂದಿರ ಎಂದ ಅವರು, ಮುಂಬರುವ ದಿನಗಳಲ್ಲಿ "ಭಿಕ್ಷಾ ಮಂದಿರ " "ದತ್ತ ಪಾದುಕೆ " ದತ್ತ ಮಂದಿರದ ಪಕ್ಕದಲ್ಲಿ ನಿರ್ಮಿಸಲಾಗುವುದು. ದತ್ತ ಭಿಕ್ಷೆ ನೀಡುವ, ಪಾದುಕೆಯನ್ನು ಪೂಜಿಸುವ, ಭಜಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ವರ್ಷ ದತ್ತಜಯಂತಿಯ ಸಂದರ್ಭದಲ್ಲಿ ದತ್ತ ಯಾತ್ರೆಯನ್ನು ಮಾಡಬೇಕು ಎಂದು ಶ್ರೀಗಳು ನಿರ್ದೇಶನ ನೀಡಿದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಹ್ಮಾನಂದ ಗಣೇಶ ಯೋಗಿಗಳು ಕ್ಷೇತ್ರದಲ್ಲಿ ದತ್ತಮಂದಿರ ಸ್ಥಾಪಿಸಿದ ನಂತರ ಶಿವಾನಂದ ಯೋಗಿಗಳು ಅದನ್ನು ಪುನಃ ಅಭಿವೃದ್ಧಿಪಡಿಸಿದರು. ಅವಧೂತರಿಂದ ಈ ದೇವಸ್ಥಾನ ಆರಂಭಗೊಂಡು, ಇದೀಗ ರಾಮಚಂದ್ರಾಪುರ ಮಠದ ಶ್ರೀಗಳಿಂದ ಉನ್ನತಿಗೇರುತ್ತಿದೆ ಎಂದರು.

ಶಾಸಕ, ನೀತಿ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಶಾಸಕ ಶರತ್ ಬಚ್ಚೇಗೌಡ ಮತ್ತು ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ ಗುರುಗಳಿಗೆ ಫಲ ಸಮರ್ಪಿಸಿ, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು.

ದತ್ತಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಯತಿಗಳ ಸಾನ್ನಿಧ್ಯದ ಶಕ್ತಿ ಈ ಕ್ಷೇತ್ರದಲ್ಲಿದೆ. ಈಗ ದತ್ತನ ಸಾನ್ನಿಧ್ಯವೂ ನಮಗೆ ಲಭಿಸುತ್ತದೆ. ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ಈ ಗುಡಿಯ ನಿರ್ಮಾಣ ಕಾರ್ಯದ ಸೇವೆ ಮಾಡಿದ್ದೇವೆ ಎಂದರು.

ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಮೂರ್ತಿ ಮತ್ತು ಗುಡಿಯನ್ನು ನಿರ್ಮಿಸಿದ ಶಿಲ್ಪಿಗಳಾದ ಸುರಾಲು ವೆಂಕಟ್ರಮಣ ಭಟ್ಟ ದಂಪತಿ ಹಾಗೂ ಸತೀಶ ದಾನಗೇರಿ ದಂಪತಿಗೆ ಶ್ರೀಗಳು ವಿಶೇಷ ಮಂತ್ರಾಕ್ಷತೆ ನೀಡಿದರು. ಸಮಿತಿಯ ಪ್ರಮುಖರನ್ನು, ದಾನಿಗಳನ್ನು ಶ್ರೀಗಳು ಫಲಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು. ಸಂಸ್ಕೃತ ಪ್ರಾಧ್ಯಾಪಕ ಡಾ. ಮಹೇಶ ಭಟ್ಟ ರಚಿಸಿದ ''''''''ದತ್ತಾಷ್ಟಕ'''''''' ವಾಚಿಸಿ, ಶ್ರೀಗಳಿಗೆ ಸಮರ್ಪಿಸಿದರು.

ಜಯಲಕ್ಷ್ಮೀ, ಶ್ರೀನಿಧಿ ಹಾಗೂ ಗಣೇಶ ಭಾಗ್ವತ ಗುರುಗೀತೆ ಪ್ರಸ್ತುತಪಡಿಸಿದರು. ಅರ್ಚಕ ಅಶೋಕ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ಎಂ. ರಾಜಶೇಖರ, ಚಂದ್ರಕಲಾ ಭಟ್ಟ, ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು.