ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ
KannadaprabhaNewsNetwork | Published : Oct 13 2023, 12:15 AM IST
ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ
ಸಾರಾಂಶ
ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿನ ಆಶ್ರಯ ಕಾಲನಿಯ ನಿವಾಸಿ ಹಾಗೂ ಟ್ರ್ಯಾಕ್ಸ್ ಚಾಲಕ ವೆಂಕಟೇಶ್(೫೦) ಅವರ ಶವ ಕಾಲನಿಯ ಹೊರವಲಯದ ಜಮೀನಿನಲ್ಲಿಯ ಮರದಲ್ಲಿ ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಸಂಡೂರು: ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿನ ಆಶ್ರಯ ಕಾಲನಿಯ ನಿವಾಸಿ ಹಾಗೂ ಟ್ರ್ಯಾಕ್ಸ್ ಚಾಲಕ ವೆಂಕಟೇಶ್(೫೦) ಅವರ ಶವ ಕಾಲನಿಯ ಹೊರವಲಯದ ಜಮೀನಿನಲ್ಲಿಯ ಮರದಲ್ಲಿ ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ದೂರು ನೀಡಿದ್ದಾರೆ. ಕೊಲೆ ಆರೋಪ: ಮೃತ ವ್ಯಕ್ತಿಯ ಸಹೋದರ ವಿ. ಕುಮಾರಸ್ವಾಮಿ ಸಂಡೂರು ಠಾಣೆಯಲ್ಲಿ ಗುರುವಾರ ದೂರನ್ನು ದಾಖಲಿಸಿ, ‘ವೆಂಕಟೇಶ್ ತನ್ನ ಮಗನಾದ ರಮೇಶನಿಗೆ ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವ ಉದ್ದೇಶದಿಂದ ಹೊಸಪೇಟೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಸಂದೀಪ್ ಕುಮಾರ್ ಎಂಬವರಿಗೆ ೨೦೨೧ರಲ್ಲಿ ₹೮.೨೦ ಲಕ್ಷ ಹಣವನ್ನು ನೀಡಿದ್ದರು. ಆದರೆ, ಸಂದೀಪ್‌ಕುಮಾರ್ ರಮೇಶನಿಗೆ ಯಾವುದೇ ಕೆಲಸವನ್ನು ಕೊಡಿಸಿಲ್ಲ ಮತ್ತು ಹಣವನ್ನು ಮರಳಿಸಿಲ್ಲ. ಇದೇ ಕಾರಣಕ್ಕಾಗಿ ಸಂದೀಪ್ ಕುಮಾರ್ ವೆಂಕಟೇಶನ ಕೈಕಾಲುಗಳನ್ನು ಕಟ್ಟಿ ಆಶ್ರಯ ಕಾಲನಿಯಿಂದ ತಿಮ್ಮಪ್ಪನಗುಡಿಗೆ ತೆರಳುವ ಮಾರ್ಗದ ಪಕ್ಕದಲ್ಲಿನ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾನೆಂದು ಆರೋಪಿಸಿ, ಕೊಲೆ ಆರೋಪಿ ಸಂದೀಪ್‌ಕುಮಾರನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೋರಿ ದೂರನ್ನು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ, ತನಿಖೆಯನ್ನು ಕೈಗೊಂಡಿದ್ದಾರೆ.