ಸಾರಾಂಶ
ಕಾಂತಮಂಗಲ ಶಾಲಾ ಜಗಲಿಯಲ್ಲಿ ತಲೆಗೆ ಕಲ್ಲು ಹೊತ್ತು ಹಾಕಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಯಿತು. ದೇಹವಿಡೀ ರಕ್ತಸಿಕ್ತವಾಗಿ ಮುಖ ಜರ್ಝರಿತಗೊಂಡಿತ್ತು.
ಸುಳ್ಯ: ಶಾಲೆಯ ಜಗಲಿಯಲ್ಲಿ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು , ಇದು ವಿರಾಜಪೇಟೆಯ ವ್ಯಕ್ತಿಯದ್ದೆಂದು ಗುರುತಿಸಲಾಗಿದೆ.ಸೋಮವಾರ ಬೆಳಗ್ಗೆ ಕಾಂತಮಂಗಲ ಶಾಲಾ ಜಗಲಿಯಲ್ಲಿ ತಲೆಗೆ ಕಲ್ಲು ಹೊತ್ತು ಹಾಕಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಯಿತು. ದೇಹವಿಡೀ ರಕ್ತಸಿಕ್ತವಾಗಿ ಮುಖ ಜರ್ಝರಿತಗೊಂಡಿತ್ತು.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದರು. ಸ್ಥಳೀಯರಿಗೆ ಈ ವ್ಯಕ್ತಿಯ ಪರಿಚಯ ಇರಲಿಲ್ಲ. ಸ್ಥಳದಲ್ಲಿದ್ದ ಸಿಮ್ ಕಾರ್ಡ್ ಆಧರಿಸಿ ಪೊಲೀಸ್ ತನಿಖೆ ಮುಂದುವರಿಯಿತು. ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ತನಿಖೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ವಿರಾಜಪೇಟೆಯ ವಸಂತ ಎಂದು ತಿಳಿದುಬಂತು. ಈತ ಕುದ್ರೆಪಾಯದಿಂದ ಮದುವೆಯಾಗಿದ್ದು, ಕಾಣಿಯೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಆತ ಕಾಂತಮಂಗಲಕ್ಕೆ ಯಾಕೆ ಬಂದ ಮತ್ತು ಅಲ್ಲಿ ಕೊಲೆಗೈಯಲ್ಪಟ್ಟಿದ್ದಾನೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎ.ಎಸ್.ಪಿ. ರಾಜೇಂದ್ರ ಡಿ.ಎಸ್., ಡಿವೈಎಸ್‌ಪಿ ಅರುಣ್ ನಾಗೇ ಗೌಡ, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಸತ್ಯನಾರಾಯಣ, ಸುಳ್ಯ ಎಸ್.ಐ. ಮಹೇಶ್ ಪೂಜಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಒಂದೇ ವಾರದಲ್ಲಿ ಎರಡನೇ ಕೊಲೆ
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾರದ ಹಿಂದೆ ಇಂಥದ್ದೇ ಘಟನೆಯೊಂದು ನಡೆದಿತ್ತು. ಬೆಳ್ಳಾರೆ ಎ.ಪಿ.ಎಂ.ಸಿ. ಕಟ್ಟಡದ ಬಳಿ ನಳಿನಿ ಪಾಟಾಜೆ ಎಂಬ ಮಹಿಳೆಯ ಮೃತದೇಹ ಕಲ್ಲಿನಲ್ಲಿ ಜಜ್ಜಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿ ವೆಂಕಪ್ಪ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪಾನಮತ್ತರಾಗಿ ಆದ ಜಗಳವೇ ಕೊಲೆಗೆ ಕಾರಣವಾಗಿತ್ತು.