ಹೊಸಪೇಟೆ: ನಡುರಸ್ತೆಯಲ್ಲೇ ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಬಂದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ಎಂ.ಪಿ. ಪ್ರಕಾಶ್ ನಗರದಲ್ಲಿ ಶನಿವಾರ ರಾತ್ರಿ 10.30ರ ಸುಮಾರಿಗೆ ನಡೆದಿದೆ.
ಇಲ್ಲಿನ ಪಾಂಡುರಂಗ ಕಾಲನಿಯ ನಿವಾಸಿ ಮಹಮ್ಮದ್ ಯೂನೂಸ್ (33) ಕೊಲೆಯಾದ ಯುವಕ.ಈತನ ಸಂಬಂಧಿ ಯುವತಿಯ ವಿವಾಹ ನಿಶ್ಚಿತಾರ್ಥ ಭಾನುವಾರ ನಡೆಯುವುದಿತ್ತು. ಈ ವಿಚಾರವಾಗಿ ಸ್ಥಳೀಯ ನಿವಾಸಿಗಳಾದ ಖಾಜಾ ಮತ್ತು ಇರ್ಫಾನ್ ಎಂಬವರು ಯೂನೂಸ್ ಮನೆಗೆ ಬರುವ ದಾರಿಯಲ್ಲಿ ಕಾದುಕೊಂಡು ಇದ್ದು, ಯೂನೂಸ್ ಕಣ್ಣಿಗೆ ಕಾರದ ಪುಡಿ ಎರಚಿ, ನಡುರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದು ಹೊಟ್ಟೆ, ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಯೂನೂಸ್ ಮೃತದೇಹ ನಡುರಸ್ತೆಯಲ್ಲಿ ಬಿದ್ದಿತ್ತು. ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್ಪಿ ಮುರಳೀಧರ ರಾವ್, ಗ್ರಾಮೀಣ ಠಾಣೆ ಪಿಐ ಗುರುರಾಜ್ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನ್ಯಾಯಾಂಗ ಬಂಧನ:
ಕ್ಷುಲ್ಲಕ ಕಾರಣಕ್ಕೆ ಎಂ.ಪಿ. ಪ್ರಕಾಶ ನಗರದಲ್ಲಿ ಯೂನೂಸ್ ಎಂಬ ವ್ಯಕ್ತಿಯನ್ನು ಇಬ್ಬರು ಆರೋಪಿಗಳು ಚಾಕುನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಇಬ್ಬರು ಆರೋಪಿಗಳಾದ ಖಾಜಾ, ಇರ್ಫಾನ್ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಸ್. ಜಾಹ್ನವಿ ತಿಳಿಸಿದರು.
ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.