ಮರ ಬಿದ್ದು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಸಾವು

| Published : Jul 27 2024, 12:50 AM IST

ಮರ ಬಿದ್ದು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 49 ಮನೆಗಳಿಗೆ ಹಾನಿ ಉಂಟಾಗಿದೆ. ಭಾರಿ ಮಳೆಯಿಂದ ಮುಂಡಗೋಡ ಹಾಗೂ ಬನವಾಸಿ ನಡುವೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಪತ್ತೆ ಕಾರ್ಯ ಮುಂದುವರಿದಿದೆ.

ಕಾರವಾರ/ಸಿದ್ದಾಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಇಳಿಮುಖವಾಗಿದ್ದರೂ ಮನೆಗಳಿಗೆ ಹಾನಿಯಾಗುತ್ತಿದೆ. ಅಲ್ಲದೇ ಕಾರಿನಲ್ಲಿ ಹೋಗುತ್ತಿದ್ದಾಗ ರಸ್ತೆ ಪಕ್ಕದ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಆಡುಕಟ್ಟಾ ಸಮೀಪದ ಗುಡ್ಡೆಕಣದ ಬಳಿ ಸಂಭವಿಸಿದೆ.

ಸಿದ್ದಾಪುರ ತಾಲೂಕಿನ ಹಲಗೇರಿಯ ದೇವರಾಜ ಅಯ್ಯಪ್ಪ ನಾಯ್ಕ(೫೯) ಎಂಬವರೇ ಮೃತಪಟ್ಟ ವ್ಯಕ್ತಿ. ಇವರು ಅನಾರೋಗ್ಯಕ್ಕೀಡಾಗಿದ್ದ ಸಂಬಂಧಿಕರ ಭೇಟಿಗೆಂದು ಪತ್ನಿ ಹಾಗೂ ಕಾರು ಚಲಾಯಿಸುತ್ತಿದ್ದ ಮಗನ ಜತೆ ಹೋಗುತ್ತಿದ್ದಾಗ ಮರವೊಂದು ಕಾರಿನ ಮೇಲೆ ಬಿದ್ದು ಎಡಭಾಗದಲ್ಲಿ ಕುಳಿತಿದ್ದ ದೇವರಾಜ ನಾಯ್ಕರಿಗೆ ತೀವ್ರ ಗಾಯಗಳಾಗಿತ್ತು ಹಾಗೂ ಅವರ ಪತ್ನಿಗೂ ಸಣ್ಣ ಗಾಯಗಳಾಗಿತ್ತು. ನಂತರ ಅವರನ್ನು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಉಪಚರಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 49 ಮನೆಗಳಿಗೆ ಹಾನಿ ಉಂಟಾಗಿದೆ. ಭಾರಿ ಮಳೆಯಿಂದ ಮುಂಡಗೋಡ ಹಾಗೂ ಬನವಾಸಿ ನಡುವೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಪತ್ತೆ ಕಾರ್ಯ ಮುಂದುವರಿದಿದೆ.ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ಭರ್ತಿಯಾಗಿದ್ದು, ಹೊರಹರಿವು ಜಾಸ್ತಿಯಾಗಿದ್ದರಿಂದ ಸೇತುವೆ ಮೇಲೆ ಮೂರು ಅಡಿ ಎತ್ತರ ನೀರು ಹರಿದ ಪರಿಣಾಮ ಶುಕ್ರವಾರ ಮಳಗಿ- ಬನವಾಸಿ ರಸ್ತೆ ಜಲಾವೃತವಾಗಿ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ಶಿರಸಿ ಹಾಗೂ ಮುಂಡಗೋಡಗಳಲ್ಲಿ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1 ಮನೆ ಸಂಪೂರ್ಣ ಹಾನಿ, 3 ಮನೆಗಳಿಗೆ ತೀವ್ರ ಹಾನಿ, 49 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಕುಮಟಾ ಮತ್ತು ಅಂಕೋಲಾದ ತಲಾ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.ಕರಾವಳಿ ತಾಲೂಕುಗಳಿಗಿಂದ ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಜೋಯಿಡಾಗಳಲ್ಲಿ ಮಳೆಯ ತೀವ್ರತೆ ಹೆಚ್ಚಿತ್ತು.

ಇಂದು 10 ತಾಲೂಕುಗಳಿಗೆ ರಜೆ

ಕಾರವಾರ: ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ ಹಿನ್ನೆಲೆ ಜಿಲ್ಲೆಯ 10 ತಾಲೂಕುಗಳ ಶಾಲಾ ಕಾಲೇಜುಗಳಿಗೆ ಶನಿವಾರ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳ ಪದವಿಪೂರ್ವ ಕಾಲೇಜುಗಳ ತನಕ, ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.