ಹಾನಗಲ್ಲ ತಾಲೂಕಿನ ತುಮರಿಕೊಪ್ಪದಲ್ಲಿ ವಿದ್ಯುತ್ ಪ್ರವಹಿಸಿ ಕಂಬ ಏರಿ ದುರಸ್ತಿ ಮಾಡುತ್ತಿದ್ದ ವ್ಯಕ್ತಿ ಸಾವು

| Published : Feb 25 2025, 12:49 AM IST

ಹಾನಗಲ್ಲ ತಾಲೂಕಿನ ತುಮರಿಕೊಪ್ಪದಲ್ಲಿ ವಿದ್ಯುತ್ ಪ್ರವಹಿಸಿ ಕಂಬ ಏರಿ ದುರಸ್ತಿ ಮಾಡುತ್ತಿದ್ದ ವ್ಯಕ್ತಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ಹಿರೇಹುಲ್ಲಾಳ ಗ್ರಾಮದ ಕಾಶಿನಾಥ ಗುಡ್ಡಪ್ಪ ಕಮ್ಮಾರ (32) ಮೃತಪಟ್ಟ ವ್ಯಕ್ತಿ.

ಹಾನಗಲ್ಲ: ಹೆಸ್ಕಾಂ ಪವರ್‌ಮ್ಯಾನ್‌ ಒಬ್ಬರು ಅಕ್ರಮವಾಗಿ ಯುವಕನನ್ನು ವಿದ್ಯುತ್‌ ಕಂಬ ಹತ್ತಿಸಿ ಕೆಲಸ ಮಾಡಿಸುತ್ತಿದ್ದ ಸಂದರ್ಭದಲ್ಲಿಯೇ ವಿದ್ಯುತ್‌ ಪ್ರವಹಿಸಿ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ತುಮರಿಕೊಪ್ಪದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಹಿರೇಹುಲ್ಲಾಳ ಗ್ರಾಮದ ಕಾಶಿನಾಥ ಗುಡ್ಡಪ್ಪ ಕಮ್ಮಾರ (32) ಮೃತಪಟ್ಟ ವ್ಯಕ್ತಿ.

ಹೆಸ್ಕಾಂ ಲೈನ್‌ಮನ್‌ ತಿರುಪತಿ ಎಂಬುವರು ಕಾಶಿನಾಥನನ್ನು ವಿದ್ಯುತ್ ತಂತಿ ದುರಸ್ತಿ ಕೆಲಸಕ್ಕಾಗಿ ಕಂಬದಲ್ಲಿ ಹತ್ತಿಸಿದ್ದರು ಎನ್ನಲಾಗಿದೆ. ಆಗ ವಿದ್ಯುತ್ ಪೂರೈಕೆ ಸ್ಥಗಿತ ಮಾಡದೇ ಕಂಬ ಹತ್ತಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಲೈನ್‌ಮನ್ ಮೇಲೆ ಸಾರ್ವಜನಿರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ವಿದ್ಯುತ್ ಲೈನ್ ದುರಸ್ತಿಗೂ ಮುನ್ನ ವಿದ್ಯುತ್ ಸ್ಟೇಶನ್‌ನಿಂದ ಎಲ್‌ಸಿ (ಲೈನ್‌ ಕ್ಲಿಯರ್‌)ಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ.

ಲೈನ್‌ಮ್ಯಾನ್‌ನ ಯಡವಟ್ಟಿಗೆ ಯುವಕನ ಸಾವು ಸಂಭವಿಸಿದೆ. ಕಾಶಿನಾಥ ಕಂಬದಿಂದ ಕೆಳಗೆ ಬಿದ್ದ ತಕ್ಷಣ ಲೈನ್‌ಮನ್ ತಿರುಪತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಹಸೀಲ್ದಾರ್ ಎಸ್. ರೇಣುಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಶಿಗ್ಗಾಂವಿ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ., ಸಿಪಿಐ ಆಂಜನೇಯ ಎನ್.ಎಚ್., ಆಡೂರ ಪಿಎಸ್‌ಐ ಶರಣಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರ ಪ್ರತಿಭಟನೆ

ಲೈನ್‌ಮನ್‌ನ ತಪ್ಪಿನಿಂದಾಗಿ ವ್ಯಕ್ತಿ ಸಾವಿಗೀಡಾದ ಘಟನೆಯ ಹಿನ್ನೆಲೆ ಗ್ರಾಮಸ್ಥರು ಆಡೂರು ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ಹಾವೇರಿ- ಶಿರಸಿ ಹೆದ್ದಾರಿ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು. ಹೆಸ್ಕಾಂ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕು. ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಈ ಹೆದ್ದಾರಿಯಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಹೆಸ್ಕಾಂ ಎಇಇ ಆನಂದ ಸುವರ್ಣಕರ ಪ್ರತಿಭಟನಾರರನ್ನು ಸಮಾಧಾನಪಡಿಸಲು ಯತ್ನಿಸಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಬಸವರಾಜ ಹಾದಿಮನಿ, ಎಸ್.ಎಂ. ಕೋತಂಬರಿ, ಭುವನೇಶ್ವರ ಶಿಡ್ಲಾಪೂರ, ಮಂಜುನಾಥ ಗುರಣ್ಣನವರ, ಮಧು ಪಾಣಿಗಟ್ಟಿ, ರಾಮನಗೌಡ ಪಾಟೀಲ, ರುದ್ರಪ್ಪ ಬಳಿಗಾರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಮಹೇಶ ಕಮಡೊಳ್ಳಿ ಹಾಗೂ ರೈತರು ಭಾಗವಹಿಸಿದ್ದರು.