40 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಈಗ ಪ್ರತ್ಯಕ್ಷ

| Published : Nov 17 2024, 01:22 AM IST

ಸಾರಾಂಶ

ಕನಕಗಿರಿ ತಾಲೂಕಿನ ಆದಾಪುರ ಗ್ರಾಮದಲ್ಲಿ ಕಳೆದ 40 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಈಗ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ.

ಆದಾಪುರ ಗ್ರಾಮದಲ್ಲಿ ವ್ಯಕ್ತಿ ನೋಡಲು ಜನಜಾತ್ರೆ

ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಕನಕಗಿರಿ ತಾಲೂಕಿನ ಆದಾಪುರ ಗ್ರಾಮದಲ್ಲಿ ಕಳೆದ 40 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಈಗ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ!

ವಿಶ್ವನಾಥಗೌಡ ಪೊಲೀಸ್ ಪಾಟೀಲ್ ಪ್ರತ್ಯಕ್ಷರಾದವರು. 1984ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಆರ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬ್ಯಾಂಕ್‌ನ ಚೆಕ್‌ಬೌನ್ಸ್ ಆರೋಪ ಹೊತ್ತಿದ್ದ ವಿಶ್ವನಾಥ ಗೌಡ ಪೋಲೀಸ್ ಪಾಟೀಲ್ ನಾಪತ್ತೆಯಾಗಿ 40 ವರ್ಷಗಳ ಆನಂತರ ಸ್ವಗ್ರಾಮ ಆದಾಪುರಕ್ಕೆ ತಮ್ಮ ಎರಡನೇ ಪತ್ನಿ ಮಕ್ಕಳೊಂದಿಗೆ ಆಗಮಿಸಿದ್ದಾರೆ.

ಏಕೆ ನಾಪತ್ತೆ?:

ಸಿಂಧನೂರು ನಗರದ ಆರ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ವಿಶ್ವನಾಥಗೌಡ ಮಲ್ಲಿಕಾರ್ಜುನ ಗೌಡ ಪೊಲೀಸ್ ಪಾಟೀಲ್ 1984ರಲ್ಲಿ ಬ್ಯಾಂಕ್‌ನಿಂದ ಗುತ್ತಿಗೆದಾರರೊಬ್ಬರಿಗೆ ₹2 ಲಕ್ಷ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿದ್ದರಿಂದ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಿಂದ ಮನನೊಂದಿದ್ದ ವಿಶ್ವನಾಥಗೌಡ 1984ರ ಡಿಸೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದರು. ಕುಟುಂಬದವರು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಕಾಣಿಯಾದ ಕುರಿತು ಪ್ರಕರಣ ದಾಖಲಿಸಿದ್ದರು.

ವಿಶ್ವನಾಥಗೌಡ ಮಹಾರಾಷ್ಟ್ರದ ಸಾತಾರ್ ಜಿಲ್ಲೆಯ ಕಡಲಿ ಇಲಾಸಪುರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ 1995ರಲ್ಲಿ ಎರಡನೇ ಮದುವೆಯಾಗಿದ್ದಾರೆ.

ಆದಾಪುರ ಗ್ರಾಮಕ್ಕೆ ತೆರಳಿ ತನ್ನ ಸಹೋದರ ಬಸನಗೌಡ ಪೊಲೀಸ್ ಪಾಟೀಲ್ ಅವರ ನಿವಾಸಕ್ಕೆ ತೆರಳಿದ್ದಾರೆ. ಮೊದಲ ಪತ್ನಿಯನ್ನೂ ಭೇಟಿ ಮಾಡಿದ್ದಾರೆ. ವಿಷಯ ತಿಳಿದು ಸಿಂಧನೂರಿನಲ್ಲಿದ್ದ ಮೊದಲ ಪತ್ನಿಯ ಮಗಳು ಆಗಮಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ವಿಶ್ವನಾಥಗೌಡ ಪೊಲೀಸ್ ಪಾಟೀಲ್ ಬಂದ ಸುದ್ದಿ ತಿಳಿಯುತ್ತಲೆ ಇಡೀ ಗ್ರಾಮದ ಜನರು ಆಗಮಿಸಿದ್ದಾರೆ.

ಸತ್ಯನುಡಿಯಾದ ಕೋಡಿಮಠ ಸ್ವಾಮೀಜಿ ಭವಿಷ್ಯ:

1984ರಲ್ಲಿ ನಾಪತ್ತೆಯಾಗಿದ್ದ ವಿಶ್ವನಾಥಗೌಡರ ಬಗ್ಗೆ ಇಡೀ ಕುಟುಂಬವೇ ಹುಡುಕಾಟ ನಡೆಸಿತ್ತು. ಆನಂತರ ಕೊನೆಯದಾಗಿ ಕೋಡಿ ಮಠಕ್ಕೆ ತೆರಳಿ ಸ್ವಾಮೀಜಿಗೆ ಭವಿಷ್ಯ ಕೇಳಿದ್ದಾರೆ. ಎಲ್ಲಿಯೂ ಹುಡುಕಬೇಡಿ, ಅವರೇ ಗ್ರಾಮಕ್ಕೆ ಒಂದಿಲ್ಲ ಒಂದು ದಿನ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದು ಸತ್ಯವಾಗಿದೆ ಎನ್ನುತ್ತಾರೆ ಕುಟುಂಬದವರು.