ಕೊಪ್ಪ: ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯ ಅಂಗಾಂಗದಾನಕ್ಕೆ ಕುಟುಂಬದವರು ಮನಸ್ಸು ಮಾಡಿ ೫ ಜನರಿಗೆ ಜೀವನ ನೀಡಿದ ಮಹತ್ಕಾರ್ಯಕ್ಕೆ ಮಾದರಿಯಾಗಿದ್ದರೆ.

ಜೀವವಿದ್ದಾಗಲೇ ದಾನ ಮಾಡಲು ಸರ್ಕಾರದ ಅನುಮತಿ ಪಡೆದ ಅಪರೂಪದ ಪ್ರಕರಣ । ಕುಟುಂಬದವರ ನಿರ್ಧಾರದಿಂದ ಐವರಿಗೆ ಜೀವದಾನ

ಕೊಪ್ಪ: ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯ ಅಂಗಾಂಗದಾನಕ್ಕೆ ಕುಟುಂಬದವರು ಮನಸ್ಸು ಮಾಡಿ ೫ ಜನರಿಗೆ ಜೀವನ ನೀಡಿದ ಮಹತ್ಕಾರ್ಯಕ್ಕೆ ಮಾದರಿಯಾಗಿದ್ದರೆ.

ತಾಲೂಕಿನ ಕುದ್ರೆಗುಂಡಿ ಬಳಿಯ ಬೆಳ್ಳೂರಿನ ಮಂಜುನಾಥ್ ಶೆಟ್ಟಿ ಅವರು ಹೋಗುತ್ತಿದ್ದ ಆಟೋ ಪಲ್ಟಿಯಾಗಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೆದುಳು ನಿಷ್ಕ್ರಿಯಗೊಂಡಿದ್ದ ಮಂಜುನಾಥ್ ಶೆಟ್ಟಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರೆ ಅವರು ಬದುಕುವುದೇ ಕಷ್ಟ ಎಂದು ವೈದ್ಯರು ತಿಳಿಸಿದ್ದರು.ಇದರಿಂದ ನೊಂದಿದ್ದ ಕುಟುಂಬದವರು ತಮ್ಮ ನೋವಿನಲ್ಲು ಅಂಗಾಂಗ ದಾನದ ಮೂಲಕ ೫ ಜನರಿಗೆ ಜೀವನ ನೀಡುವ ಮಹತ್ವದ ನಿರ್ಧಾರ ಮಾಡಿದರು.

ಅವರ ದೇಹದ ಉಳಿದ ಭಾಗಗಳಾದ ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಅಮ್ಮ ಫೌಂಡೇಶನ್ ಟ್ರಸ್ಟಿ ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಮಣಿಪಾಲ್‌ ಆಸ್ಪತ್ರೆಯಿಂದ ಮಂಜುನಾಥ್ ಶೆಟ್ಟಿ ಅವರನ್ನು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ವೆಂಟಿಲೇಟರ್‌ನಲ್ಲೇ ಕರೆದುಕೊಂಡು ಬಂದರು.

ವ್ಯಕ್ತಿ ಬದುಕಿದ್ದಾಗಲೇ ಅಂಗಾಂಗ ದಾನ ಮಾಡಲು ಸರ್ಕಾರದ ಅನುಮತಿ ಪಡೆದು ದಾನಕ್ಕೆ ಮುಂದಾದ ಅಪರೂಪದ ಪ್ರಕರಣ. ಅನುಮತಿ ದೊರೆತ ನಂತರ ಕೊಪ್ಪದ ಪ್ರಶಮನಿ ಆಸ್ಪತ್ರೆಯಲ್ಲಿ ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಯ ನುರಿತ ವೈದ್ಯರ ಸಹಾಯದೊಂದಿಗೆ ಶಸ್ತ್ರಚಿಕಿತ್ಸೆ ಮಾಡಿ ಮಂಜುನಾಥ್ ಅವರ ಕಿಡ್ನಿ, ಲಿವರ್, ಮತ್ತು ಎರಡು ಕಣ್ಣುಗಳನ್ನು ಅಗತ್ಯ ವಿರುವ ವ್ಯಕ್ತಿಗಳ ಜೀವ ಉಳಿಸಲು ನೀಡಲಾಯಿತು.

ತಮ್ಮ ಕುಟುಂಬದವರನ್ನು ಕಳೆದು ಕೊಳ್ಳುವ ದುಃಖದ ಸಂದರ್ಭದಲ್ಲಿ ಇಂತಹ ಮಹಾನ್ ಕಾರ್ಯಕ್ಕೆ ಕೈಜೋಡಿಸಿ, ಜೀವನ ಸಾರ್ಥಕತೆ ಮೆರೆದ ಮಂಜುನಾಥ್ ಅವರ ಪತ್ನಿ ಮತ್ತು ಕುಟುಂಬಕ್ಕೆ ಪ್ರಶಮನಿ ಆಸ್ಪತ್ರೆ ವೈದ್ಯ ಡಾ: ಉದಯಶಂಕರ್ ಮತ್ತು ಆಡಳಿತಾಧಿಕಾರಿ ರೇಖಾ ಉದಯಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ತರಹದ ಅಪರೂಪದ ಅಂಗಾಂಗ ದಾನ ಕಾರ್ಯ ಕೊಪ್ಪ ಪ್ರಶಮನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಬಗ್ಗೆ ಮಾಹಿತಿ ನೀಡಿ ಮುಂದೆ ಆ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡ ಮೃತರ ಕುಟುಂಬಸ್ಥನ್ನು ಭೇಟಿ ಮಾಡಿ ಸಾಂತ್ವನ ನೀಡಿದರು.