ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ನೇಣು ಹಗ್ಗ ತುಂಡಾಗಿ ಬಿದ್ದು ಸಾವು

| Published : Dec 31 2024, 01:00 AM IST

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ನೇಣು ಹಗ್ಗ ತುಂಡಾಗಿ ಬಿದ್ದು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮೆಲ್‌ರಾಯ್ (55) ಮನೆಯ ತಾರಸಿಯ ಮೇಲ್ಛಾವಣಿಯ ಕಬ್ಬಿಣದ ಪಟ್ಟಿಗೆ ಹಗ್ಗ ಕಟ್ಟಿ ಅದನ್ನು ಕುತ್ತಿಗೆ ಬಿಗಿದು, ಆತ್ಮಹತ್ಯೆ ಮಾಡಿಕೊಳ್ಳಲು ತಾರಸಿಯಂದ ಕೆಳಗೆ ಜಿಗಿದ್ದರು. ಅವರ ದೇಹದ ಭಾರಕ್ಕೆ ಹಗ್ಗ ತುಂಡಾಗಿ ಹೊರಗೆ ಸುಮಾರು 20 ಅಡಿ ಕೆಳಗೆ ಅಂಗಳಕ್ಕೆ ಬಿದ್ದರು. ಪರಿಣಾಮ ತಲೆಗೆ ತೀವ್ರತರ ಗಾಯಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲನಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕುತ್ತಿಗೆ ಬಿಗಿದಿದ್ದ ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಮೆಲ್‌ರಾಯ್ (55) ಎಂದು ಗುರುತಿಸಲಾಗಿದೆ. ಅವರ ಮನೆಯ ತಾರಸಿಯ ಮೇಲ್ಛಾವಣಿಯ ಕಬ್ಬಿಣದ ಪಟ್ಟಿಗೆ ಹಗ್ಗ ಕಟ್ಟಿ ಅದನ್ನು ಕುತ್ತಿಗೆ ಬಿಗಿದು, ಆತ್ಮಹತ್ಯೆ ಮಾಡಿಕೊಳ್ಳಲು ತಾರಸಿಯಂದ ಕೆಳಗೆ ಜಿಗಿದ್ದರು. ಅವರ ದೇಹದ ಭಾರಕ್ಕೆ ಹಗ್ಗ ತುಂಡಾಗಿ ಹೊರಗೆ ಸುಮಾರು 20 ಅಡಿ ಕೆಳಗೆ ಅಂಗಳಕ್ಕೆ ಬಿದ್ದರು. ಪರಿಣಾಮ ತಲೆಗೆ ತೀವ್ರತರ ಗಾಯಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅವರು ವಾಣಿಜ್ಯ ಹಡಗಿನಲ್ಲಿ ಉದ್ಯೋಗಿಯಾಗಿದ್ದು, ಇಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಘಟನೆಯ ನಡೆಯುವ ಸಂದರ್ಭ ಪತ್ನಿ ಮೈಸೂರಿಗೆ ತೆರಳಿದ್ದು, ಒಂಟಿಯಾಗಿದ್ದ ಮೆಲ್‌ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟನ್ನು ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡುವಂತೆ ಬರೆದಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಅಲ್ಲದೇ ಡೆತ್ ನೋಟ್‌ ಜೊತೆ ಅವರು 2018ರಲ್ಲಿಯೇ ದೆಹಲಿಯ ಸಪ್ದರ್‌ಜಂಗ್ ಆಸ್ಪತ್ರೆಯ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗೆ ಮರಣಾನಂತರ ಅಂಗಾಂಗ ದಾನ ಮಾಡಿದ ದಾಖಲೆಗಳು ಪತ್ತೆಯಾಗಿದೆ.

ಅವರು ಅಂಗಳದಲ್ಲಿ ಬಿದ್ದಿರುವುದನ್ನು ಪಕ್ಕದ ಮನೆಯವರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ನೋಡಿ, ಪರಿಶೀಲನೆ, ತನಿಖೆ ನಡೆಸಿ, ಶವವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ 11 ಗಂಟೆ ಮಿಕ್ಕಿತ್ತು. ಆದ್ದರಿಂದ ಅಂಗಾಂಗ ದಾನದ ಸಮಯ ಮೀರಿದ್ದರಿಂದ, ಅವರ ಕೊನೆಯ ಆಸೆ ಈಡೇರಿಸಲಾಗಿಲ್ಲ.

ಮಣಿಪಾಲ ಠಾಣಾ ಎಸ್ಐ ಅನಿಲ್ ಕುಮಾರ್, ಎಎಸ್ಐ ನಾಗೇಶ್ ನಾಯ್ಕ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮಣಿಪಾಲ ಆಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು.