ಮೀನು ಹಿಡಿಯಲು ಹೋಗಿ ಶಿಂಷಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ

| Published : Jul 18 2025, 12:45 AM IST

ಸಾರಾಂಶ

ಶಿಂಷಾ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಇಗ್ಗಲೂರು ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರನ್ನು ರಾತ್ರಿ ಶಿಂಷಾ ನದಿಗೆ ಹರಿಬಿಡಲಾಗಿದೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಸೇತುವೆ ಕೆಳಗಡೆ ಕುಳಿತು ಮೀನು ಹಿಡಿಯಲು ಹೋಗಿದ್ದವರಿಗೆ ಏಕಾಏಕಿ ನೀರು ಅಪ್ಪಳಿಸಿದೆ.

ಹಲಗೂರು: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಶಿಂಷಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಸಮೀಪದ ತೊರೆಕಾಡನಹಳ್ಳಿ ಸೇತುವೆ ಬಳಿ ಬುಧವಾರ ತಡರಾತ್ರಿ ನಡೆದಿದೆ. ಅನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಬ್ಯಾಡರಾಯನದೊಡ್ಡಿ ಗ್ರಾಮದ ಅರುಣ್ (24) ಶಿಂಷಾ ನದಿಯಲ್ಲಿ ಕೊಚ್ಚಿ ಹೋದವರು. ತೊರೆಕಾಡನಹಳ್ಳಿಯ ವ್ಯಾಪ್ತಿಯ ಶಿಂಷಾ ನದಿಗೆ ಮೀನು ಹಿಡಿಯಲು ತನ್ನ ಐದು ಮಂದಿ ಸಹಪಾಟಿಗಳೊಂದಿಗೆ ಬುಧವಾರ ರಾತ್ರಿ ಬಂದಿದ್ದರು. ಶಿಂಷಾ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಇಗ್ಗಲೂರು ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರನ್ನು ರಾತ್ರಿ ಶಿಂಷಾ ನದಿಗೆ ಹರಿಬಿಡಲಾಗಿದೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಸೇತುವೆ ಕೆಳಗಡೆ ಕುಳಿತು ಮೀನು ಹಿಡಿಯಲು ಹೋಗಿದ್ದವರಿಗೆ ಏಕಾಏಕಿ ನೀರು ಅಪ್ಪಳಿಸಿದೆ. ಒಂದೆಡೆ ಓಡಿ ಹೋದ ನಾಲ್ವರು ದುರಂತದಿಂದ ಪಾರಾಗಿದ್ದಾರೆ. ವಿರುದ್ಧ ದಿಕ್ಕಿ ನಡೆಗೆ ಈಜಲು ಹೋದ ಅರುಣ್ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಹಲಗೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ ಮತ್ತು ಮಳವಳ್ಳಿ ಅಗ್ನಿಶಾಮಕ ಠಾಣಾ ಅಧಿಕಾರಿ ಅರುಣ್ ಮತ್ತು ಶ್ರೀಧರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಅರುಣ್ ಪತ್ತೆ ಹಚ್ಚುವ ಕಾರ್ಯಚಾರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.