ಮುಖ್ಯರಸ್ತೆಯಲ್ಲಿ ಬಾಯ್ತೆರೆದ ಮ್ಯಾನ್‌ಹೋಲ್!

| Published : Apr 30 2024, 02:01 AM IST

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಮುಖ್ಯರಸ್ತೆಯ ಹಳೇ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಮ್ಯಾನ್‌ಹೋಲ್‌ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಗಂಭೀರ ನಿರ್ಲಕ್ಷ್ಯ ವಹಿಸಿರುವ ನಗರಸಭೆ ತುರ್ತು ಕ್ರಮ ವಹಿಸುವುದು ಅಗತ್ಯವಾಗಿದೆ.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಮುಖ್ಯರಸ್ತೆಯ ಹಳೇ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಮ್ಯಾನ್‌ಹೋಲ್‌ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಗಂಭೀರ ನಿರ್ಲಕ್ಷ್ಯ ವಹಿಸಿರುವ ನಗರಸಭೆ ತುರ್ತು ಕ್ರಮ ವಹಿಸುವುದು ಅಗತ್ಯವಾಗಿದೆ.

ಕಳೆದ ಕೆಲ ವಾರಗಳ ಹಿಂದೆಯೇ ಮ್ಯಾನ್‌ಹೋಲ್‌ ಶಿಥಿಲಗೊಂಡಿದೆ. ಭಾರಿ ವಾಹನಗಳ ಓಡಾಟದಿಂದ ಮ್ಯಾನ್‌ಹೋಲ್‌ನ ಮುಚ್ಚಳ ಮುರಿದಿದೆ. ಜೊತೆಗೆ ಶಿಥಿಲಗೊಂಡ ರಸ್ತೆಯ ಪರಿಣಾಮ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ, ನಗರಸಭೆ ಅಧಿಕಾರಿಗಳಾಗಲೀ ಅಗತ್ಯ ಕ್ರಮ ಕೈಗೊಳ್ಳದಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಒಳಚರಂಡಿ ಅವ್ಯವಸ್ಥೆ:

ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಇಂದು-ನಿನ್ನೆಯದಲ್ಲ. ಯೋಜನೆ ಆರಂಭವಾಗಿ ದಶಕವೇ ಕಳೆದಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಹಲವು ವಾರ್ಡುಗಳಲ್ಲಿ ಒಳಚರಂಡಿ ಕಾಮಗಾರಿ ಇಂದಿಗೂ ಸಂಪೂರ್ಣಗೊಂಡಿಲ್ಲ. ಕೆಲವೆಡೆ ಸಂಪೂರ್ಣಗೊಂಡಿದ್ದರೂ ಜನತೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಹಲವೆಡೆ ಮ್ಯಾನ್‌ಹೋಲ್‌ಗಳು ತುಂಬಿ ರಸ್ತೆಯಲ್ಲಿ ಹೊಲಸು ಹರಿಯುತ್ತಿದ್ದರೂ ಕೇಳುವವರಿಲ್ಲ.

ತ್ಯಾಜ್ಯ ನಿರ್ವಹಣೆ ಸವಾಲು:

ದೊಡ್ಡಬಳ್ಳಾಪುರ ನಗರದಲ್ಲಿ ಒಳಚರಂಡಿ ಅನುಷ್ಠಾನದ ಲೋಪ ತ್ಯಾಜ್ಯ ನೀರು ಸಂಸ್ಕರಣೆಗೂ ಸವಾಲಾಗಿದೆ. ಆರಂಭಿಕ ಹಂತದಲ್ಲಿ ನಾಗರಕೆರೆ ಅಂಗಳದಲ್ಲಿ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಿದ್ದ ಪರಿಣಾಮ ಕೆರೆಯ ನೀರು ಮಲಿನಗೊಂಡಿದ್ದಲ್ಲದೆ, ಸಂಗ್ರಹವಾಗುವ ಮಳೆ ನೀರೂ ಕೂಡ ಮ್ಯಾನ್‌ಹೋಲ್‌ ಮೂಲಕ ಹರಿದು ಹೋಗುವ ಆತಂಕ ನಿರ್ಮಾಣವಾಗಿತ್ತು. ಹಲವು ಹೋರಾಟಗಳ ಬಳಿಕ ನಾಗರಕೆರೆಯಲ್ಲಿ ಹಾಕಲಾಗಿದ್ದ ಮ್ಯಾನ್‌ಹೋಲ್‌ಗಳನ್ನು ಎತ್ತರಗೊಳಿಸಿ ತಾತ್ಕಾಲಿಕ ಪರಿಹಾರ ಒದಗಿಸಲಾಗಿತ್ತು.

ಹಲವು ರಸ್ತೆಗಳ ಡಾಂಬರೀಕರಣ ವೇಳೆ ಮ್ಯಾನ್‌ ಹೋಲ್‌ಗಳ ಎತ್ತರೀಕರಣ ಅನಿವಾರ್ಯವಾಗಿದ್ದು, ಮುಂದಾಲೋಚನೆ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಮ್ಯಾನ್‌ಹೋಲ್‌ಗಳು ಸದಾ ಕಾಲ ಸಮಸ್ಯೆಯ ಕೇಂದ್ರವೇ ಆಗುತ್ತಿವೆ. ಬೇಸಿಗೆ ವೇಳೆಯೇ ಮ್ಯಾನ್‌ಹೋಲ್‌ಗಳ ಅವಾಂತರ ಜನರನ್ನು ಕಂಗೆಡಿಸಿದ್ದರೆ, ಇನ್ನು ಮಳೆಗಾಲ ಆರಂಭವಾದರೆ ಪರಿಸ್ಥಿತಿ ಏನಾಗಬಹುದು ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ.

ಮ್ಯಾನ್‌ಹೋಲ್‌ಗಳ ಸಮರ್ಪಕ ನಿರ್ವಹಣೆ ಅಗತ್ಯ:

ರಸ್ತೆಗಳಲ್ಲಿನ ಮ್ಯಾನ್‌ಹೋಲ್‌ಗಳು ಕಳಪೆ ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಂದ ಶಿಥಿಲಗೊಳ್ಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವ ಮೊದಲೇ ಎಚ್ಚರ ವಹಿಸುವ ಅಗತ್ಯವಿದೆ. ನಗರಸಭೆ ಅಧಿಕಾರಿಗಳು ಮ್ಯಾನ್‌ಹೋಲ್‌ಗಳ ಸರ್ವೇ ನಡೆಸಿ ಶಿಥಿಲಾವಸ್ಥೆಯಲ್ಲಿರುವ ಮ್ಯಾನ್‌ಹೋಲ್‌ಗಳನ್ನು ದುರಸ್ಥಿ ಮಾಡುವ ಅಗತ್ಯವಿದೆ. ಜೊತೆಗೆ ಸಮರ್ಪಕ ತ್ಯಾಜ್ಯ ನೀರು ಹರಿವಿಗೆ ಅನುವು ಮಾಡಿಕೊಡಬೇಕಿದೆ.

ಕೊಂಗಾಡಿಯಪ್ಪ ಮುಖ್ಯರಸ್ತೆ ವಾಣಿಜ್ಯ ಹಾಗೂ ಜನವಸತಿ ಪ್ರದೇಶವಾಗಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಜನರು ಈ ಮಾರ್ಗದಲ್ಲಿ ಓಡಾಡುವುದು ಸಹಜವಾಗಿದೆ. ಅಸಂಖ್ಯಾತ ದ್ವಿಚಕ್ರ ವಾಹನಗಳು, ಇತರೆ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತದೆ. ಹೀಗಾಗಿ ಅಪಾಯವಾಗುವ ಮುನ್ನ ನಗರಸಭೆ ಎಚ್ಚೆತ್ತು ದುರಸ್ಥಿಗೊಳಿಸಬೇಕಿದೆ. ತಪ್ಪಿದಲ್ಲಿ ನಗರಸಭೆ ನಿರ್ಲಕ್ಷ್ಯದ ವಿರುದ್ದ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ.

ಕೋಟ್‌............

ಕೊಂಗಾಡಿಯಪ್ಪ ಮುಖ್ಯರಸ್ತೆ ಸಮಸ್ಯೆಗಳ ಕೂಪವಾಗಿದೆ. ಡಾಂಬರು ಕಂಡು ದಶಕಗಳೇ ಉರುಳಿವೆ. ನಿತ್ಯ ಧೂಳಿನ ಅಭಿಷೇಕ ಇಲ್ಲಿ ಸಂಚರಿಸುವ ಜನರಿಗೆ ಉಚಿತವಾಗಿ ದೊರಕುತ್ತದೆ. ಈಗ ಮ್ಯಾನ್‌ಹೋಲ್‌ ಶಿಥಿಲಗೊಂಡಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ನಗರಸಭೆ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು.

-ಮಂಜುನಾಥ್, ಸ್ಥಳೀಯ 29ಕೆಡಿಬಿಪಿ3- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಮುಖ್ಯರಸ್ತೆಯಲ್ಲಿ ಶಿಥಿಲಗೊಂಡಿರುವ ಮ್ಯಾನ್‌ಹೋಲ್‌ ಅಪಾಯವನ್ನು ಆಹ್ವಾನಿಸುತ್ತಿದೆ.