ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಶಾಸಕ ಎ. ಮಂಜುನಾಥ್ ರವರು ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಬಹಿರಂಗ ಚರ್ಚೆ ನಡೆಸಲು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ ರವರು ನೇರ ಸವಾಲು ಹಾಕಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಎ.ಮಂಜುನಾಥ್ ರವರು ಚರ್ಚೆಗೆ ಸಿದ್ಧ ಎಂದು ಹೇಳಿದ್ದರು, ಆದರೆ ಇಲ್ಲಿಯವರೆಗೆ ಯಾವುದೇ ದಿನಾಂಕ ನಿಗದಿಪಡಿಸದ ಕಾರಣ ನಾವೇ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಏಪ್ರಿಲ್ 25, ಶನಿವಾರ ಬೆಳಗ್ಗೆ 11 ಗಂಟೆಗೆ ತಾಲೂಕಿನ ಚಕ್ರಬಾವಿ ವಿ.ಎಸ್.ಎಸ್.ಎನ್ ಕಚೇರಿಗೆ ದಾಖಲೆಗಳೊಂದಿಗೆ ಬರಲಿ ಅವರು ಬರಲಿ, ನಾವೂ ಬರುತ್ತೇವೆ ಎಂದು ಸವಾಲು ಹಾಕಿದರು.

₹ 600 ಕೋಟಿ ಹಗರಣದ ಆರೋಪ, ಕುದೂರು ಬಿಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಪ್ರಕರಣ, ಜಾಗದ ವಿವಾದ ಅಥವಾ ಮರ ಕಡಿಯುವ ವಿಷಯ ಸೇರಿದಂತೆ ಎಲ್ಲಾ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳ ಸಮೇತ ಅವರು ಬರಲಿ, ಶಾಸಕ ಬಾಲಕೃಷ್ಣ ರವರು ಕೂಡ ಅಲ್ಲಿಗೆ ಬಂದು ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಲಿದ್ದಾರೆ ಎಂದು ಕೃಷ್ಣಮೂರ್ತಿ ಹೇಳಿದರು.

ವೈಯುಕ್ತಿಕ ಟೀಕೆಗಳಿಗೆ ಕಿಡಿ:


ಜೆಡಿಎಸ್ ಮುಖಂಡ ಹಾಗೂ ಬೆಳಗುಂಬ ವಿಎಸ್ಎಸ್ಎನ್ ಅಧ್ಯಕ್ಷ ಹೊಸಹಳ್ಳಿ ರಂಗಣಿ ವಿರುದ್ಧ ವೈಯುಕ್ತಿಕ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ರಾಜಕೀಯದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಸುಳ್ಳು ಅಪಪ್ರಚಾರಗಳ ಮೂಲಕ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ. ನಾನು ಹಿಂದೆ ಕೂಡ ಬಾಲಕೃಷ್ಣ ರವರ ಪರವಾಗಿ ಚುನಾವಣೆ ಮಾಡಿದ್ದೇನೆ, ಮಾಜಿ ಸಚಿವ ಎಚ್. ಎಂ. ರೇವಣ್ಣ ನನಗೆ ರಾಜಕೀಯ ಗುರುಗಳಾಗಿದ್ದು, ನಾನು ಕಾಂಗ್ರೆಸ್ ಪಕ್ಷದಲ್ಲಿ ಮೊದಲೇ ಗುರುತಿಸಿಕೊಂಡಿದ್ದೆ, ನನ್ನನ್ನು ರಂಗಣಿ ರವರು ನಾಯಕರಾಗಿ ಮಾಡಿಲ್ಲ, ಈ ಹಿಂದೆ ಎ.ಮಂಜುನಾಥ್ ರವರ ಜೊತೆ ಇದ್ದಾಗ ಜೆಡಿಎಸ್ ಪಕ್ಷದ ಪರವಾಗಿ ದುಡಿದಿದ್ದೇನೆ. ಅವರ ಜೊತೆ ಇದ್ದಾಗಲೇ ಎಷ್ಟು ಸಾಲ ಮಾಡಿದ್ದೇನೆ ಎಂಬುದು ಗೊತ್ತಿದೆ, ರಂಗಣಿ ಚಿಲ್ಲರೆ ಕಾಸಿಗಾಗಿ ಸಮಾಜ ಸೇವಕ ಬಾಗೇಗೌಡರು, ನಂತರ ಎ.ಮಂಜುನಾಥ್, ನನ್ನ ಬಳಿ, ಈಗ ಬಿಡದಿ ರೋಹಿತ್ ಜೊತೆ ಎಂಜಲು ಕಾಸು ಪಡೆದುಕೊಳ್ಳುತ್ತಿರುವುದು ಗೊತ್ತಿದೆ. ಈಗ ಜೆಡಿಎಸ್ ತಾಲೂಕು ಅಧ್ಯಕ್ಷರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇವರು ತಗೀಕುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಿಂತಾಗ ₹8 ಲಕ್ಷ ಹಣವನ್ನು ನಾನು ಕೊಟ್ಟೆ, ಅದನ್ನು ಅವರ ಒಡವೆ ಬಿಡಿಸಿಕೊಳ್ಳಲು ಹಣ ಬಳಸಿಕೊಂಡಿರುವುದು ಗೊತ್ತಿದೆ, ನನ್ನ ರಾಸಲೀಲೆ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡಿದ್ದು, ಇನ್ನು ಮುಂದೆ ಈ ರೀತಿ ಸುಳ್ಳು ಆರೋಪ ಮಾಡಿದರೆ ನೇರವಾಗಿ ಅವರ ವಿರುದ್ಧ ದಾಖಲೆ ಸಮೇತ ಬಹಿರಂಗಪಡಿಸಲು ಸಿದ್ಧನಿದ್ದೇನೆ, ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷದ ಪರವಾಗಿ ವೈಯುಕ್ತಿಕ ಟೀಕೆ ನಿಲ್ಲಿಸಬೇಕು ಎಂದು ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ರೆಹಮಾನ್ ಖಾನ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್, ನರಸಿಂಹಮೂರ್ತಿ, ಶಿವಕುಮಾರ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.