ತನ್ನನ್ನು ಮದುವೆಯಾಗಲು ನಿರಾಕರಿಸಿದ ವಿವಾಹಿತಳನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದ್ದು, ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ತನ್ನನ್ನು ಮದುವೆಯಾಗಲು ನಿರಾಕರಿಸಿದ ವಿವಾಹಿತಳನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದ್ದು, ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.ಪಟ್ಟಣದ ಕಾಳಮ್ಮ ನಗರದ ಆಶ್ರಯ ಕಾಲನಿ ನಿವಾಸಿ ರಂಜಿತಾ ಮಲ್ಲಪ್ಪ ಬಸ್ಸೊಡೆ (30) ಮೃತರು. ಅದೇ ನಗರದ ಮಹಮ್ಮದ ರಫಿಕ್ ಇಮಾಮಸಾಬ ಕೊಲೆ ಆರೋಪಿ. ಶನಿವಾರ ಹತ್ಯೆ ಬಳಿಕ ರಫಿಕ್ ಕಾಡಿನಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ 4 ಪೊಲೀಸ್ ತಂಡ ರಚಿಸಲಾಗಿದೆ.
ವಿವಾಹಿತಳಾದ ರಂಜಿತಾ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದು, ರಾಮಾಪುರ ಶಾಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಅವಳಿಗೆ ರಫಿಕ್ ಸದಾ ತನ್ನನ್ನು ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ. ಆದರೆ, ರಂಜಿತಾ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಫಿಕ್, ಶನಿವಾರ ಮಧ್ಯಾಹ್ನ ಆಕೆ ಶಾಲೆಯಿಂದ ಬರುತ್ತಿದ್ದಾಗ ದಾರಿಯಲ್ಲಿ ಅಡ್ಡಗಟ್ಟಿ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆಕೆಯನ್ನು ಹುಬ್ಬಳ್ಳಿ ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕುತ್ತಿಗೆಯ 3 ನರಗಳು ತುಂಡಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತಳ ಸಹೋದರಿ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.ಕೊಲೆ ಮಾಹಿತಿ ಹಬ್ಬುತ್ತಿದ್ದಂತೆ ನಾಗರಿಕರು ಪಟ್ಟಣದ ಠಾಣೆ ಎದುರು ಜಮಾಯಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ. ಅವರಿಗೆ ಒತ್ತಾಯಿಸಿದರು. ಆರೋಪಿ ಮನೆಗೆ ಪೊಲೀಸ್ ರಕ್ಷಣೆ ನೀಡಿದ್ದನ್ನು ಖಂಡಿಸಿದರು. ಕಾಳಮ್ಮ ನಗರದ ಸುತ್ತ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭಧ್ರತೆ ಒದಗಿಸಲಾಗಿದೆ.
ಇಂದು ಯಲ್ಲಾಪುರ ಬಂದ್:ಮಹಿಳೆಯ ಕೊಲೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಜ.4ರಂದು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ.
ಬೆಳಗ್ಗೆ 9ಕ್ಕೆ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನೆ ಆರಂಭವಾಗಲಿದ್ದು, ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡುವಂತೆ ವಿ.ಹಿಂ.ಪ ಅಧ್ಯಕ್ಷ ಗಜಾನನ ನಾಯ್ಕ ಮನವಿ ಮಾಡಿದ್ದಾರೆ. ಇನ್ನು ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಸಹ ನಡೆಯುವ ಸಾಧ್ಯತೆ ಇಲ್ಲ.