ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ನದಿಗೂ ಅಪಾಯ ಕಾದಿದೆ. ಆದ್ದರಿಂದ ಈ ಭಾಗದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಪ್ರತಿಯೊಬ್ಬರು ನದಿಯ ಸಂರಕ್ಷಣೆಗೆ ದೊಡ್ಡ ಮಟ್ಟದ ಜನಾಂದೋಲನ ನಡೆಸುವುದು ಅವಶ್ಯಕ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ನದಿಗೂ ಅಪಾಯ ಕಾದಿದೆ. ಆದ್ದರಿಂದ ಈ ಭಾಗದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಪ್ರತಿಯೊಬ್ಬರು ನದಿಯ ಸಂರಕ್ಷಣೆಗೆ ದೊಡ್ಡ ಮಟ್ಟದ ಜನಾಂದೋಲನ ನಡೆಸುವುದು ಅವಶ್ಯಕ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪೂರ ಹೇಳಿದರು.

ಅವರು ನಗರದ ಟೌನ್‌ಹಾಲ್‌ನಲ್ಲಿ ಮಂಗಳವಾರ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ನಿಮಿತ್ತ ಗಂಗಾವತಿ ತಾಲೂಕಿನ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ಹಮ್ಮಿಕೊಂಡಿರುವ 3ನೇ ಹಂತದ ಜಲ-ಜನಜಾಗೃತಿ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಈ ಮೂರು ರಾಜ್ಯಗಳಿಗೆ ನೀರೊದಗಿಸುವ ತುಂಗಭದ್ರಾ ಜಲಾಶಯವು ಅಪಾಯದ ಅಂಚಿನಲ್ಲಿದೆ. ನದಿಯಲ್ಲಿನ ಹೂಳು ತುಂಬಿರುವುದು ಅಷ್ಟೇ ಅಲ್ಲದೇ ನೀರಲ್ಲಿ ತ್ಯಾಜ್ಯ ಸೇರುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಡಿ.28 ರಂದು ಅಂಬಾಮಠ, 29 ರಂದು ಗೊರೇಬಾಳ ಗ್ರಾಮದಲ್ಲಿ ಸಂಚರಿಸಿ 30 ರಂದು ಸಿಂಧನೂರಿಗೆ ಪಾದಯಾತ್ರೆ ಮೂಲಕ ಬಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ 600 ಜನರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ವಸತಿ ವ್ಯವಸ್ಥೆ ಕಲ್ಪಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ವಿಕಾಸಕ್ಕಿಂತ ಜೀವ ಮುಖ್ಯ. ಹೀಗಾಗಿ ಈ ಭಾಗದ ಆರೋಗ್ಯದ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.

ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ಸಾನ್ನಿಧ್ಯವನ್ನು ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ಆರ್.ತಿಮ್ಮಯ್ಯ ನಾಯಕ, ಉದ್ಯಮಿ ಬಿ.ಶ್ರೀಹರ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್‌ಸಾಬ್‌, ಬಿಜೆಪಿ ಮುಖಂಡರಾದ ಈರೇಶ ಇಲ್ಲೂರು, ರಾಜೇಶ ಹಿರೇಮಠ, ಮೌಲಾನ ತಾಜುದ್ದೀನ್, ಅಭಿಯಾನದ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಮಲ್ಲನಗೌಡ ಮಾವಿನಮಡು, ವೀರಶೈವ ಸಮಾಜದ ಅಧ್ಯಕ್ಷ ಟಿ.ಪಂಪನಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್.ಮಸ್ಕಿ ಉಪಸ್ಥಿತರಿದ್ದರು. ಪಂಪಯ್ಯಸ್ವಾಮಿ ಸಾಲಿಮಠ ನಿರೂಪಿಸಿದರು.