15ರಂದು ಮಡಿಕೇರಿಯಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ

| Published : Mar 12 2024, 02:08 AM IST

ಸಾರಾಂಶ

ಮಾ. 15ರಂದು ಮಡಿಕೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ಅಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳನ್ನು ಬಲಪಡಿಸುವುದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕೇರಿಸುವ ದೃಷ್ಟಿಯಿಂದ ಮಾ.15 ರಂದು ಮಡಿಕೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ಪು ರವೀಂದ್ರ, ಅಂದು ತಮ್ಮ ಅಧ್ಯಕ್ಷತೆಯಲ್ಲಿ ನಗರದ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದ್ದು, ಇದಕ್ಕೂ ಮೊದಲು ಖಾಸಗಿ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಯಲಿದೆ.ಸಮಾವೇಶವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾ‌ರ್, ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಅಶ್ವಥ್ ನಾರಾಯಣ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ಹಿಂದುಳಿದ ವರ್ಗಗಳ ಜಿಲ್ಲಾ ಉಸ್ತುವಾರಿ ವಿಠಲ್ ಪೂಜಾರಿ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದ ಅಪ್ರು ರವೀಂದ್ರ ಕೊಡಗಿನಲ್ಲಿ ಹಿಂದುಳಿದ ವರ್ಗಗಳು ಬಿಜೆಪಿ ಪರವಾಗಿದ್ದು, ಪಕ್ಷವನ್ನು ಮತ್ತಷ್ಟು ಬಲವಾಗಿ ಸಂಘಟಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು ಎಂದರು.ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ವಿ.ಕೆ.ಲೋಕೇಶ್ ಮಾತನಾಡಿ ಹಿಂದುಳಿದ ವರ್ಗದವರನ್ನು ಹಾಗೂ ಶೋಷಿತರನ್ನು ಗುರುತಿಸಿ ರಾಷ್ಟ್ರಪತಿ ಹುದ್ದೆ ಸೇರಿದಂತೆ ಉನ್ನತ ಅಧಿಕಾರಗಳನ್ನು ನೀಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಎಂದ ಅವರು ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಿಂದುಳಿದ ವರ್ಗದಿಂದ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ 36 ಹಿಂದುಳಿದ ವರ್ಗಗಳ ಪಂಗಡವಿದ್ದು, ಇವರ ಬೆಂಬಲ ಬಿಜೆಪಿಗಿದೆ ಎಂದರು.ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್‌. ರಘು ಮಾತನಾಡಿ ಭಾರತೀಯ ಜನತಾ ಪಾರ್ಟಿಯನ್ನು ಹಿಂದುಳಿದ ವರ್ಗ ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿದೆ. ಬಿಜೆಪಿಯ ನೀತಿಯಾದ ರಾಷ್ಟ್ರೀಯತೆ ಮೊದಲು, ನಂತರ ಪಕ್ಷ, ಕೊನೆಗೆ ವ್ಯಕ್ತಿ ಎಂಬ ವಿಚಾರವನ್ನು ಹಿಂದುಳಿದ ವರ್ಗ ಒಪ್ಪಿಕೊಂಡಿದೆ. ಇದು ಬಿಜೆಪಿಯ ಬಹುದೊಡ್ಡ ಆಸ್ತಿಯಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕ‌ರ್ ಅವರ ಆಶಯದಂತೆ ಹಿಂದುಳಿದ ವರ್ಗಗಳ ಆಯೋಗ ರಚಿಸುವುದರ ಮೂಲಕ ಅದಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡಿದ್ದಾರೆ. ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ಎಂ. ಬಿ. ಬಿ. ಎಸ್. ಎಂ.ಡಿ. ಪೋಸ್ಟ್ ಗಳಲ್ಲಿ ಶೇ. 27 ಮೀಸಲಾತಿ ನೀಡಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 37, 000 ರು. ಸಹಾಯಧನ ನೀಡುತ್ತಿದ್ದಾರೆ. ಶೇ.27 ಮೀಸಲಾತಿಯಲ್ಲಿ ಕೇಂದ್ರೀಯ ವಿದ್ಯಾಲಯ, ಸೈನಿಕ್ ಶಾಲೆ, ನವೋದಯ ವಿದ್ಯಾಲಯಗಳಲ್ಲಿ ಮೀಸಲಾತಿ ನೀಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಹಾಗೂ ಹಿಂದುಳಿದ ವರ್ಗಗಳ ಜನ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ಶ್ರೇಷ್ಠ ಪ್ರಶಸ್ತಿಯಾದ ಭಾರತ ರತ್ನ ನೀಡುವುದರೊಂದಿಗೆ ಹಿಂದುಳಿದ ವರ್ಗವನ್ನು ಗೌರವಿಸಿದ್ದಾರೆ. ಸಚಿವ ಸಂಪುಟದಲ್ಲೂ 27 ಮಂದಿ ಹಿಂದುಳಿವರ್ಗದವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಹತ್ತು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಮಾಡಿ ಪ್ರಪಂಚದಲ್ಲೇ 5ನೇ ದೊಡ್ಡ ಆರ್ಥಿಕ ಸ್ಥಾನಮಾನಕ್ಕೆ ಕೊಂಡೊಯ್ದು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿರುವ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ಕೇಂದ್ರದಲ್ಲಿ ತರಬೇಕೆನ್ನುವುದು ನಮ್ಮ ಗುರಿಯಾಗಿದೆ ಎಂದರು. ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಮಡಿಕೇರಿ ನಗರಾಧ್ಯಕ್ಷ ಗಜೇಂದ್ರ ಪಿ.ಜಿ. ಹಾಗೂ ಗ್ರಾಮಾಂತರ ಅಧ್ಯಕ್ಷ ಪಿ.ಎಂ.ಪ್ರತೀಪ್ ಸುದ್ದಿಗೋಷ್ಠಿಯಲ್ಲಿದ್ದರು.