ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಳವಳ್ಳಿಯಲ್ಲಿ ಏ.16ರಂದು ಜೆಡಿಎಸ್-ಬಿಜೆಪಿ ಪಕ್ಷಗಳ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಡಾ.ಕೆ.ಅನ್ನದಾನಿ ತಿಳಿಸಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಬಿಜೆಪಿ ಮುಖಂಡರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕ್ಷೇತ್ರ ವ್ಯಾಪ್ತಿಯ ಎರಡು ಪಕ್ಷಗಳ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದರು.
ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸೇರಿದಂತೆ ರಾಜ್ಯದ ಅನೇಕ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.ಜಿಲ್ಲೆಯ ರೈತರು, ಕಾವೇರಿ ಉಳಿವು ಹಾಗೂ ಸಮಗ್ರ ಅಭಿವೃದ್ಧಿಗಾಗಿ ಜನರು ಮತ್ತು ನಾಯಕರ ಒತ್ತಾಯದಂತೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚಡಿಕೆ ಗೆಲುವಿಗೆ ಒಗ್ಗೂಡಿ ಪ್ರಚಾರ ನಡೆಸುತ್ತಿದ್ದೇವೆ ಎಂದರು.
ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಲಮನ್ನಾ ಹಾಗೂ ಸಾರಾಯಿ, ಲಾಟರಿ ನಿಷೇಧಂಥ ಜನಪರ ಕಾರ್ಯಕ್ರಮ ಕೊಟ್ಟಿರುವ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ಈಗಾಗಲೇ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಲಿದ್ದಾರೆ. ಜಿಲ್ಲೆಯ ಇದರಿಂದ ಅಭಿವೃದ್ಧಿಯಾಗಲಿದೆ. ಸಮಾವೇಶದಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಎರಡು ಪಕ್ಷಗಳ ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮನಿರಾಜು, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ತಾಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಮಹಿಳಾ ಘಟಕದ ಪದ್ಮಮ್ಮ, ಉಮಾ, ಅನಿತಾ, ಮುಖಂಡರಾದ ಮಲ್ಲೇಗೌಡ, ಕನ್ನಹಳ್ಳಿ ಸುಂದ್ರಪ್ಪ, ಪುಟ್ಟರಾಮು, ಸತೀಶ್, ನಾಗರಾಜು, ಕಾಂತರಾಜು ಇದ್ದರು.ರಾಜಕೀಯ ಉದ್ದೇಶಕ್ಕಾಗಿ ಎಚ್ಡಿಕೆ ಹೇಳಿಕೆ ತಿರುಚಿ ಕಾಂಗ್ರೆಸ್ ಅಪಪ್ರಚಾರ: ಡಾ.ಕೆ.ಅನ್ನದಾನಿ
ಮಳವಳ್ಳಿ:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವಿಟ್ಟುಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಟೀಕಿಸಿ ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ನವರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಚ್ .ಡಿ.ಕುಮಾರಸ್ವಾಮಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದು, ಇಂತಹ ಸುಳ್ಳು, ಅಪಪ್ರಚಾರಗಳಿಂದ ಎಚ್ಡಿಕೆ ಸೋಲಿಸಲು ಅಸಾಧ್ಯ. ಎನ್ನುವುದನ್ನು ನಮ್ಮ ವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಪಪ್ರಚಾರಕ್ಕೆ ಮುನಿರಾಜು ಕಿಡಿ:
ಬಿಜೆಪಿ ಮುಖಂಡ ಜಿ.ಮುನಿರಾಜು ಮಾತನಾಡಿ, ಕೆಲ ಕಿಡಿಗೇಡಿಗಳು ನಾನು ಕಾಂಗ್ರೆಸ್ ನ ಸ್ಟಾರ್ ಚಂದ್ರು ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಬುಕ್ ಆಗಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ನನ್ನ ಉಸಿರು ಇರುವವರೆಗೂ ನಾನು ಬಿಜೆಪಿಯಲ್ಲಿಯೇ ಇರುವೆ. ಯಾರೂ ಬಳಿ ಒಂದು ನಯಾಪೈಸೆ ಪಡೆದಿಲ್ಲ ಎಂದು ಕಿಡಿಕಾರಿದರು.ಇನ್ನೊಬ್ಬರ ಹಣಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ. ನಂಬಿಕೆ ದ್ರೋಹದ ಕೆಲಸ ಮಾಡುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇಂತಹ ಅಪಪ್ರಚಾರ ಹಾಗೂ ಜೆಡಿಎಸ್-ಬಿಜೆಪಿ ಯಡವಟ್ಟಿನಿಂದ ನಮ್ಮ ಎದುರಾಳಿಗೆ ಅಷ್ಟೊಂದು ದೊಡ್ಡ ಅಂತರದಿಂದ ಗೆಲುವು ಸಿಕ್ಕಿದ್ದು ಎಂದು ಬೇಸರ ವ್ಯಕ್ತಪಡಿಸಿದರು.
ಏ.16ರ ಸಮಾವೇಶಕ್ಕೆ ತಾಲೂಕಿನ ಬಿಜೆಪಿಯ 10 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿ ಕುಮಾರಣ್ಣ ಅವರ ಗೆಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.