ಕುಟ್ರಳ್ಳಿ ಅವೈಜ್ಞಾನಿಕ ಟೋಲ್‌ಗೇಟ್ ತೆರವುಗೊಳಿಸಲು ರಸ್ತೆ ತಡೆದು ಬೃಹತ್ ಪ್ರತಿಭಟನೆ

| Published : Oct 04 2024, 01:06 AM IST

ಕುಟ್ರಳ್ಳಿ ಅವೈಜ್ಞಾನಿಕ ಟೋಲ್‌ಗೇಟ್ ತೆರವುಗೊಳಿಸಲು ರಸ್ತೆ ತಡೆದು ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಟ್ರಳ್ಳಿ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಟೋಲ್‌ ಗೇಟ್‌ ಜನಸಾಮಾನ್ಯರ ನಿತ್ಯ ಶೋಷಣೆಯ ಕೇಂದ್ರವಾಗಿದ್ದು, ಈ ಕೂಡಲೇ ಸರ್ಕಾರ ತೆರವುಗೊಳಿಸದಿದ್ದಲ್ಲಿ ಕಿತ್ತೊಗೆಯುವುದಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಟ್ಟಣದ ಹೊರವಲಯ ಕುಟ್ರಳ್ಳಿ ಸಮೀಪ ಈಗಾಗಲೇ ನಿರ್ಮಿಸಲಾದ ಅವೈಜ್ಞಾನಿಕ ಟೋಲ್‌ಗೇಟ್ ತೆರವುಗೊಳಿಸಿ ನಿತ್ಯ ಅಲೆದಾಡುವ ಸಹಸ್ರಾರು ರೈತರು, ಕೂಲಿ ಕಾರ್ಮಿಕರು, ಸಾರ್ವಜನಿಕರ ಶೋಷಣೆಯನ್ನು ತಪ್ಪಿಸುವಂತೆ ಒತ್ತಾಯಿಸಿ ತಾಲೂಕು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಸ್ಥಳದಲ್ಲಿ ರಸ್ತೆ ತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಯಿತು .

ತಾಲೂಕಿನ ಮೂಲೆಮೂಲೆಯಿಂದ ಧಾವಿಸಿದ್ದ ನೂರಾರು ರೈತರು ಸಾರ್ವಜನಿಕರು ಟೋಲ್ ತೆಗೆಯಬೇಕು ಸ್ಥಳೀಯರಿಗೆ,ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೇವಲ 30 ಕಿ.ಮೀ. ಅಂತರದಲ್ಲಿ ಸವಳಂಗ ಸಮೀಪ ಹಾಗೂ ಕುಟ್ರಳ್ಳಿ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಟೋಲ್‌ ಗೇಟ್‌ ಜನಸಾಮಾನ್ಯರ ನಿತ್ಯ ಶೋಷಣೆಯ ಕೇಂದ್ರವಾಗಿದ್ದು, ಈ ಕೂಡಲೇ ಸರ್ಕಾರ ತೆರವುಗೊಳಿಸದಿದ್ದಲ್ಲಿ ಕಿತ್ತೊಗೆಯುವುದಾಗಿ ಕಿಡಿಕಾರಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್ ಮಾತನಾಡಿ, ಈ ಭಾಗದಿಂದ ಪ್ರತಿನಿತ್ಯ ರೈತರು ಸರಕು ಸಾಮಗ್ರಿ ತರಲು, ಮಾರಲು ಹೋಗಬೇಕಾದ ಅನಿವಾರ್ಯತೆ ಇದೆ. ಪ್ರತಿ ಬಾರಿ ಹಣ ನೀಡಬೇಕಾದ ಟೋಲ್ ನಿಂದ ರೈತರಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ವಕೀಲ ಶಿವರಾಜ್ ಜಿ.ಪಿ ಮಾತನಾಡಿ, ಸರ್ಕಾರದ ಈ ಅವೈಜ್ಞಾನಿಕ ತೀರ್ಮಾನದಿಂದ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ ಕೂಡಲೇ ಟೋಲ್ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ ಮಾತನಾಡಿ, ಟೋಲ್‌ ನಿಂದ ಜನಸಾಮಾನ್ಯರಿಗೆ, ರೈತರಿಗೆ ವಾಹನ ಮಾಲೀಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತರಲಾಗಿದೆ,ಅವರು ಟೋಲ್ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸ್ಥಳಾಂತರಿಸುವ ಬಗ್ಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಮಾತನಾಡಿ, ಜಿಲ್ಲಾಧಿಕಾರಿಗಳು ಇದೇ ದಿ 9 ರಂದು ಹೋರಾಟಗಾರರ ಹಾಗೂ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದು ಕೂಡಲೇ ಹೋರಾಟ ಸ್ಥಗಿತಗೊಳಿಸಿ ಸಭೆಗೆ ಪಾಲ್ಗೊಳ್ಳಲು ಮನವಿ ಮಾಡಿದರು.

ನಂತರದಲ್ಲಿ ವಕೀಲ ಜಿ.ಪಿ.ಶಿವರಾಜ್, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಮಾತನಾಡಿದ್ದು, ಅ.9 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಸಮಸ್ಯೆ ಶಾಶ್ವತವಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂದೆ ಪಡೆದಿರುವುದಾಗಿ ತಿಳಿಸಿದರು.

ಪ್ರಗತಿಪರ ರೈತ ಲೋಹಿತ್ ಕಣಿವೆಮನೆ ಮಾತನಾಡಿ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ತೀರ್ಮಾನವಾಗುವವರೆಗೂ ತಾತ್ಕಾಲಿಕವಾಗಿ ಸಮೀಪದಲ್ಲಿನ ಚಾನಲ್ ಏರಿಯನ್ನು ಸಮತಟ್ಟುಗೊಳಿಸಿ ರಸ್ತೆ ನಿರ್ಮಿಸಿ ಖಾಸಗಿ ಕಾರು,ದ್ವಿಚಕ್ರ ವಾಹನ ಸಹಿತ ಸಣ್ಣಪುಟ್ಟ ವಾಹನಗಳು ತೆರಳಲು ಅನುಕೂಲ ಕಲ್ಪಿಸಿಕೊಳ್ಳೋಣ ಎಂದರು.

ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಡಲಾಗಿತ್ತು.-----

ಕೋಟ್‌:

ಜಿಲ್ಲಾಧಿಕಾರಿಗಳು ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಿದ್ದು, ಇದರ ಸ್ಥಳಾಂತರ ಮಾಡಲು ಸಚಿವ ಸಂಪುಟ ಸಭೆಯ ಅನುಮತಿ ಅಗತ್ಯ. ಕಾನೂನಿನಡಿಯಲ್ಲೇ ಕ್ರಮ ವಹಿಸಲಾಗುವುದು. ಸದ್ಯ ಜಿಲ್ಲಾಡಳಿತ ನಿಮ್ಮ ಆಶಯದಂತೆ ತಕ್ಷಣ ಸರ್ಕಾರಕ್ಕೆಈ ಬಗ್ಗೆ ಮನವಿ ಮಾಡಿಕೊಂಡಿದೆ.

- ಆರ್.ಯತೀಶ್, ಉಪವಿಭಾಗಾಧಿಕಾರಿಫೋಟೋ: ಟೋಲ್ ಗೇಟ್ ತೆರವುಗೊಳಿಸುವಂತೆ ಗುರುವಾರ ನಡೆದ ಪ್ರತಿಭಟನೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್ ಮಾತನಾಡಿದರು.[ಫೋಟೋ ಫೈಲ್ ನಂ.3 ಕೆ.ಎಸ್.ಕೆ.ಪಿ 2]