ಅಂಜಲಿ ಹತ್ಯೆ ಖಂಡಿಸಿ ಮಠಾಧೀಶರ ಬೃಹತ್‌ ಪ್ರತಿಭಟನೆ

| Published : May 19 2024, 01:53 AM IST

ಸಾರಾಂಶ

ಹತ್ಯೆ ಆರೋಪಿಯನ್ನು ಎನ್‌ಕೌಂಟರ್‌ ಮಾಡಬೇಕು, ನೇಹಾ ಹಾಗೂ ಅಂಜಲಿ ಹತ್ಯೆ ಹಂತಕರಿಗೆ ಏಕಕಾಲದಲ್ಲಿಯೇ ಗಲ್ಲು ಶಿಕ್ಷೆ ವಿಧಿಸಬೇಕು, ಮಹಿಳೆಯರ ರಕ್ಷಣೆಗೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಮಠಾಧೀಶರು ಹೇಳಿದರು.

ಹುಬ್ಬಳ್ಳಿ:

ಅಂಜಲಿ ಅಂಬಿಗೇರ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಶನಿವಾರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ ಸೇರಿದಂತೆ ಹಲವು ಮಠಾಧೀಶರ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಹತ್ಯೆ ಆರೋಪಿಯನ್ನು ಎನ್‌ಕೌಂಟರ್‌ ಮಾಡಬೇಕು, ನೇಹಾ ಹಾಗೂ ಅಂಜಲಿ ಹತ್ಯೆ ಹಂತಕರಿಗೆ ಏಕಕಾಲದಲ್ಲಿಯೇ ಗಲ್ಲು ಶಿಕ್ಷೆ ವಿಧಿಸಬೇಕು, ಮಹಿಳೆಯರ ರಕ್ಷಣೆಗೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಮಠಾಧೀಶರು ಘೋಷಿಸಿದರು.

ನಗರದ ವೀರಾಪುರ ಓಣಿಯಿಂದ ಆರಂಭವಾದ ಬೃಹತ್‌ ಪ್ರತಿಭಟನಾ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ಆಗಮಿಸಿ ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಶ್ರೀ, ದಾರ್ಶನಿಕರು ನಡೆದಾಡಿದ ನೆಲದಲ್ಲಿ ಇಂತಹ ದುರ್ಘಟನೆ ನಡೆದಿರುವುದು ಖಂಡನಾರ್ಹ. ಸರ್ಕಾರಗಳು ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಜಲಿ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಬಡವರು ತೊಂದರೆ ಎಂದು ಬಂದಾಗ ಪೊಲೀಸರು ನ್ಯಾಯ ಕೊಡಿಸಬೇಕೇ ಹೊರತು ನಿರ್ಲಕ್ಷ್ಯ ಮಾಡಬಾರದು. ಕಾನೂನಿನ ಭಯ ಇಲ್ಲದಿರುವುದಕ್ಕೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮನೆಗೆ ನುಗ್ಗಿ ಅಂಜಲಿ ಹತ್ಯೆ ಮಾಡಿದ ಆರೋಪಿಗೆ ಸರ್ಕಾರ ಎನ್‌ಕೌಂಟರ್‌ ಮಾಡಬೇಕು. ಬಡ ಕುಟುಂಬದವರಿಗೆ ಸರ್ಕಾರ ಆರ್ಥಿಕ ಸಹಾಯ, ಸಹಕಾರ ನೀಡುವ ಮೂಲಕ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿಗೆ ಶಿಕ್ಷೆಯಾಗುವ ವರೆಗೂ ಹಾಗೂ ಅಂಜಲಿ ಕುಟುಂಬಕ್ಕೆ ನ್ಯಾಯ ದೊರೆಯುವ ವರೆಗೂ ಈ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ ಮಾತನಾಡಿ, ಒಂದು ತಿಂಗಳಲ್ಲಿ ಎರಡು ಅಮಾನುಷ ಘಟನೆಗಳು ನಡೆಯುತ್ತವೆ ಎಂದರೆ ಸಮಾಜವೇ ತಲೆ ತಗ್ಗಿಸುವಂತಾಗಿದೆ. ನೇಹಾ ಪ್ರಕರಣದಲ್ಲಿ ಎಲ್ಲರೂ ಬಂದರು. ಆದರೆ, ಅಂಜಲಿ ವಿಷಯದಲ್ಲಿ ಯಾರೂ ಬಂದು ಅವರ ದುಖಃ ಆಲಿಸುವ ಕಾರ್ಯ ಮಾಡಲಿಲ್ಲ. ವಿಶೇಷ ನ್ಯಾಯಾಲಯ ಸ್ಥಾಪಿಸಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಏಕಕಾಲಕ್ಕೆ ಗಲ್ಲುಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಧಾರವಾಡ ಮನಸೂರು ಮಠದ ಬಸವರಾಜ ದೇವರು ಮಾತನಾಡಿ, ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು. ಅವನೊಬ್ಬ ಪಾಪಿಯಾಗಿದ್ದು, ಕಾನೂನಿನ ನೆರವು ಬೇಡ. ಆತನನ್ನು ಶಿಕ್ಷಿಸಬೇಕು. ಆಳುವ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿವೆ. ಇಂದಿನ ಅವ್ಯವಸ್ಥೆಯ ವಿರುದ್ಧ ಮಠಾಧೀಶರು ಬೀದಿಗಿಳಿದು ಹೋರಾಡುತ್ತಿದ್ದಾರೆ ಎಂದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಅರ್ಥವಾಗುತ್ತದೆ. ಮಹಿಳೆಯರಿಗೆ ಯಾವುದೇ ತೊಂದರೆಯಾದರೆ ನಾವು ಸಹಿಸುವುದಿಲ್ಲ. ನಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ, ತಾವು ಸಲ್ಲಿಸಿದ ಮನವಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನವಲಗುಂದದ ನಿಂಗಪ್ಪ ಬಾರಕೇರ ಎನ್ನುವವರು ಮೃತ ಅಂಜಲಿ ಅಜ್ಜಿಗೆ ₹ 20 ಸಾವಿರ ಮೊತ್ತದ ಚೆಕ್‌ ವಿತರಿಸಿದರು.

ಕುಂದಗೋಳದ ಬಸವಣ್ಣಜ್ಜನವರು, ಜಮಖಂಡಿಯ ಮಹಾಂತೇಶ್ವರ ಶ್ರೀ, ಕುಂದಗೋಳದ ಶಿವಾನಂದ ಶ್ರೀ, ಕುಂದಗೋಳದ ಅಭಿನವ ಬಸವಣ್ಣ ಅಜ್ಜನವರು, ಧಾರವಾಡದ ರೇವಣಸಿದ್ದೇಶ್ವರ ಮಠದ ಬಸವ ದೇವರು, ಸವದತ್ತಿಯ ಮಹಾಂತ ಶ್ರೀ, ಮಹಾದಾಯಿ ಹೋರಾಟಗಾರ, ರೈತ ಮುಖಂಡ ವೀರೇಶ ಸೊಬದರಮಠ ಸೇರಿದಂತೆ ಹಲವು ಮಠಾಧೀಶರು, ಅಂಜಲಿ ಅಜ್ಜಿ ಗಂಗಮ್ಮ, ಸಹೋದರಿಯರಾದ ಸಂಜನಾ, ಯಶೋದಾ, ಪೂಜಾ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಕುಸಿದು ಬಿದ್ದ ಅಂಜಲಿ ಸಹೋದರಿ

ಅಂಜಲಿ ಹತ್ಯೆ ವಿರೋಧಿಸಿ ವೀರಾಪುರ ಓಣಿಯಿಂದ ಆರಂಭವಾಗಿದ್ದ ಪ್ರತಿಭಟನಾ ಮೆರವಣಿಗೆ ಬಳಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಂಜಲಿ ಸಹೋದರಿ ಯಶೋದಾ ವೇದಿಕೆ ಮೇಲೆಯೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಉಪಚರಿಸಲಾಯಿತು.ಉರುಳಾಡಿದ ನಿರಂಜನ:

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ಮೃತ ನೇಹಾ ತಂದೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವಾಹನಗಳನ್ನು ನಿಲ್ಲಿಸದೇ ಪೊಲೀಸರು ಬಿಡುತ್ತಿರುವುದನ್ನು ಖಂಡಿಸಿ ನೆಲದ ಮೇಲೆ ಮಲಗಿ ಉರುಳಾಡಿದರು. ಈ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.