ತಾಯಿ ಮತ್ತು ಮಗು ಆರೈಕೆ ಕೇಂದ್ರಕ್ಕೆ ಆಗ್ರಹಿಸಿ ಪೂರ್ವಭಾವಿ ಸಭೆ

| Published : Mar 03 2025, 01:49 AM IST

ಸಾರಾಂಶ

ರಾಜ್ಯದ ಆಡಳಿತರೂಢ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾಗಿ ಪ್ರತಿನಿಧಿಸುವ ನರಸೀಪುರ ತಾಲೂಕು ಕೇಂದ್ರದಲ್ಲಿ ತಾಯಿ ಮಗು ಆರೈಕೆ ಹಾಗೂ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ತಾಯಿ - ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕಾಗಿ ಒತ್ತಾಯಿಸಿ ಮಾ. 4ರಂದು ಬೃಹತ್ ಜಾಥಾ ಮತ್ತು ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಮೋಹನ್ ಕುಮಾರಿ ಹೇಳಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಭಾನುವಾರ ಪ್ರತಿಭಟನೆಯ ಪೂರ್ವಭಾವಿಯಲ್ಲಿ ಮಾತನಾಡಿದ ಅವರು, ಆರೋಗ್ಯಪೂರ್ಣ ಸಮಾಜಕ್ಕಾಗಿ - ಆರೋಗ್ಯವಂತ ಮಗು ಧ್ಯೇಯ ವಾಕ್ಯದೊಡನೆ ತಾಲೂಕಿನಲ್ಲೊಂದು ಸುಸಜ್ಜಿತ ತಾಯಿ ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಿಸುವಂತೆ ಸರ್ಕಾರವನ್ನು ಆಗ್ರಹಿಸಲು ಬೆಳಗ್ಗೆ 10.30ಕ್ಕೆ ತಹಸೀಲ್ದಾರ್ ಕಚೇರಿಯಿಂದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿವರೆಗೆ ಬೃಹತ್ ಜಾಥಾ ಮತ್ತು ಸಹಿ ಸಂಗ್ರಹ ಆಂದೋಲನ ಹೋರಾಟ ಆಯೋಜಿಸುತ್ತಿದ್ದೇವೆ ಎಂದರು.

ಹೋರಾಟ ಸಮಿತಿ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ರಾಜ್ಯದ ಆಡಳಿತರೂಢ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾಗಿ ಪ್ರತಿನಿಧಿಸುವ ನರಸೀಪುರ ತಾಲೂಕು ಕೇಂದ್ರದಲ್ಲಿ ತಾಯಿ ಮಗು ಆರೈಕೆ ಹಾಗೂ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು. ಅದಕ್ಕಾಗಿ ಈಗಿನ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಬೃಹತ್ ಜಾಥಾ ಮತ್ತು ಸಹಿ ಸಂಗ್ರಹ ಆಂದೋಲನದ ಹೋರಾಟದ ಹೆಜ್ಜೆಯನ್ನಿಡುತ್ತಿದ್ದೇವೆ. ಜನಸಮುದಾಯಕ್ಕೆ ಅತ್ಯಗತ್ಯವಾದ ನಮ್ಮ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದ್ದು, ಮುಂದಿನ ಹೋರಾಟಕ್ಕೆ ಆಸ್ಪದ ನೀಡಲ್ಲ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದರು.

ಹೋರಾಟದ ರೂಪುರೇಷೆಯ ಬಗ್ಗೆ ಸಮಿತಿ ಉಪಾಧ್ಯಕ್ಷೆ ಕೋಮಲಾಕ್ಷಿ ನಾಗರಾಜ್ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ರೇಖಾ, ಸಂಚಾಲಕ ಸುರೇಶ್, ಮಣಿಲಾ, ಮಹದೇವಮ್ಮ, ಚಂದ್ರಮ್ಯ, ರೋಜಾ, ಶ್ವೇತಾ, ಆಶಾ, ಚೌಡಮ್ಮ, ನೇತ್ರಾವತಿ, ದಿವ್ಯಾ, ಹೊನ್ನಮ್ಮ, ನಿಂಗಮ್ಮಣ್ಣಿ, ಗೌರಮ್ಮ , ದಲಿತ ಸಂಘರ್ಷ ಸಮಿತಿ ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರು ರಾಜು, ಮುಖಂಡರಾದ ಸುರೇಶ್, ಕಿರಗಸೂರು ರಜನಿ, ಬನ್ನಹಳ್ಳಿಹುಂಡಿ ಉಮೇಶ್, ಬಿಲಿಗೆರೆಹುಂಡಿ ಶಿವಕುಮಾರ್, ಶಾಂತಕುಮಾರ್ ಇದ್ದರು.