ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಯನ್ನು ಅಭಿವೃದ್ಧಿಗೊಳಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕು. ನವೀಕೃತ ಸಮಾಧಿ ಸ್ಥಳವನ್ನು ಅದ್ಧೂರಿಯಾಗಿ ಮರು ಉದ್ಘಾಟನೆ ಮಾಡಬೇಕು. ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ₹200 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿ ನಡೆದಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 22ನೇ ದಿನಕ್ಕೆ ಕಾಲಿಟ್ಟಿದ್ದು, ಸಹನೆ ಕಳೆದುಕೊಂಡ ಹೋರಾಟಗಾರರು ಮಂಗಳವಾರ ಚಕ್ಕಡಿ, ಟ್ರ್ಯಾಕ್ಟರ್, ಬೈಕ್ ರ್‍ಯಾಲಿ ನಡೆಸಿ ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ ಎದುರು ಸೇರಿದ ಹೋರಾಟಗಾರರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಮಲತಾಯಿ ಧೋರಣೆ ತಾಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.
ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭವಾದ ಬೈಕ್ ರ್‍ಯಾಲಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಚಾಲನೆ ನೀಡಿದರು. ಬಳಿಕ ಬೈಕ್ ರ್‍ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಬಜಾರ ರಸ್ತೆ, ಮೇದಾರ ಗಲ್ಲಿ, ಬಸವ ಸರ್ಕಲ್, ಇಂಚಲ ಕ್ರಾಸ್, ಎಪಿಎಂಸಿ ಗಣೇಶ ದೇವಸ್ಥಾನ ಮಾರ್ಗವಾಗಿ ಚನ್ನಮ್ಮನ ವೃತ್ತಕ್ಕೆ ಆಗಮಿಸಿತು. ಎಪಿಎಂಸಿ ಗಣೇಶ ದೇವಸ್ಥಾನ ಆವರಣದಲ್ಲಿ ಚಕ್ಕಡಿ, ಟ್ರ್ಯಾಕ್ಟರ್‌ಗಳ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಪಾದಚಾರಿಗಳು, ಪ್ರಯಾಣಿಕರು ಸುಗಮ ಸಂಚಾರಕ್ಕಾಗಿ ಪರದಾಡಿದರು.ಶಾಸಕರ ಮನೆಗೆ ಪೊಲೀಸ್ ಭದ್ರತೆ:
ಶಾಸಕ ಮಹಾಂತೇಶ ಕೌಜಲಗಿ ಮನೆಗೆ ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಶಾಸಕರ ಮನೆ ಎರಡು ಬದಿಯಲ್ಲಿ ಪೊಲೀಸ್ ಬ್ಯಾರಿಗೇಟ್ ಹಾಕಲಾಗಿತ್ತು. ಶಾಸಕರ ಮನೆ ಮುಂದೆ ನಿಂತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ಹೋರಾಟದಲ್ಲಿ ಭಾಗವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯದಲ್ಲಿಯೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅನೇಕ ಹಗರಣಗಳು ನಡೆದರೂ ಯಾವುದೇ ಕ್ರಮವಹಿಸಿಲ್ಲ. ಕಿತ್ತೂರು ಚನ್ನಮ್ಮ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರ ಕೇಳಿ ಬಂದಿದೆ. ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಕುರಿತು ಕಳೆದ 23 ದಿನಗಳಿಂದ ಹೋರಾಟ ನಡೆದರೂ ವಿಧಾನ ಮಂಡಲದಲ್ಲಿ ಈ ಭಾಗದ ಶಾಸಕರು ಯಾವುದೇ ಚರ್ಚೆ ಮಾಡದೆ ಈ ನಾಡಿಗೆ ಅಗೌರವ ತೋರಿದ್ದಾರೆ. ಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಕಳೆದ 23 ದಿನಗಳಿಂದ ಈ ಭಾಗದ ಜನತೆ ಜಾತ್ಯಾತೀತ, ಪಕ್ಷಾತೀತವಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಿದರೂ ಶಾಸಕರು ಸರಿಯಾಗಿ ಸ್ಪಂದಿಸಿಲ್ಲ. ಇದು ನಿಜಕ್ಕೂ ನೋವಿನ ಸಂಗತಿ. ಹೋರಾಟಗಾರರು ಬೇಡಿಕೆಗಳ ಕುರಿತು ಗಡುವು ನೀಡಿದಾಗ ಹೋರಾಟದ ವೇದಿಕೆಯಲ್ಲಿ ಮುಖಂಡರು ಯಾರೂ ಇಲ್ಲದ ಸಮಯದಲ್ಲಿ ಶಾಸಕರು ಬಂದು ಸುಳ್ಳು ಭರವಸೆ ನೀಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಇನ್ನೂ ಹೆಚ್ಚಾಗಲ್ಲಿದ್ದು, ಏನೇ ಅನಾಹುತ ನಡೆದರೆ ಶಾಸಕರೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಕಲಾವಿದ ಸಿ.ಕೆ.ಮೆಕ್ಕೇದ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ಹೋರಾಟಗಾರ ರಫೀಕ ಬಡೆಘರ, ವಕೀಲ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಹುಂಬಿ, ಬೀರಪ್ಪ ದೇಶನೂರ ಮಾತನಾಡಿದರು. ಹಿರಿಯ ವಕೀಲ ಎಂ.ವೈ. ಸೋಮಣ್ಣವರ, ಅಪ್ಪಾಸಾಹೇಬ ಲಕ್ಕುಂಡಿ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಸೋಮನಾಥ ಸೊಪ್ಪಿಮಠ, ರಾಜು ಕುಡಸೋಮಣ್ಣವರ, ಮಹೇಶ ಹರಕುಣಿ, ಈಶ್ವರ ಕೊಪ್ಪದ, ರಿತೇಶ ಪಾಟೀಲ, ಸುಭಾಷ ಬಾಗೇವಡಿ, ಮುರುಗೇಶ ಗುಂಡ್ಲೂರ, ಮಹಾಂತೇಶ ಗುಂಡ್ಲೂರ, ಆನಂದ ಮೂಗಿ, ಆನಂದಗೌಡ ಪಾಟೀಲ, ದುಂಡೇಶ ಗರಗದ, ನಿಂಗಪ್ಪ ಚೌಡನ್ನವರ, ಚನ್ನಪ್ಪ ಹಾದಿಮನಿ, ಮಹಾಂತೇಶ ಕಮತ, ಉದಯ ಕೊಟಬಾಗಿ, ಆಶಾ ಕಸಮಳಗಿ, ಶಾಂತಾ ಮಡ್ಡಿಕರ ಸೇರಿದಂತೆ ವಿವಿಧ ಗ್ರಾಮಸ್ಥರು, ರೈತ, ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ವೇಳೆ ಹೋರಾಟಗಾರರಿಂದ ತಹಸೀಲ್ದಾರ ಹೆಚ್.ಎನ್.ಶಿರಹಟ್ಟಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೆ ಮುಂಜಾಗೃತ ಕ್ರಮವಾಗಿ ಡಿವೈಎಸ್ಪಿ, ಇಬ್ಬರು ಸಿಪಿಐ, ಐವರು ಪಿಎಸ್‌ಐ ಸೇರಿ 200 ಪೊಲೀಸ್ ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಹೋರಾಟಗಾರರು ನಡು ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ಅಲ್ಲದೇ ಏ.3ರಂದು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚನ್ನಮ್ಮ ಅಭಿಮಾನಿಗಳಿಂದ ಅರೆಬೆತ್ತಲೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆಯನ್ನು ಹೋರಾಟಗಾರರ ನೀಡಿದ್ದಾರೆ.----------
ಕೋಟ್ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರದ ಯಾವುದೇ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಶಿಷ್ಟಾಚಾರ ಪಾಲಿಸಿ ಸದನದಲ್ಲಿ ಅಂಗಿಕರಿಸಿದರೆ ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಚನ್ನಮ್ಮ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ.
ಅರವಿಂದ ಬೆಲ್ಲದ, ಶಾಸಕ