ಜೆಡಿಎಸ್ ಮುಂಚೂಣಿ ನಾಯಕರು, ಕಾರ್ಯಕರ್ತರ ಸಭೆ

| Published : Mar 31 2024, 02:00 AM IST

ಸಾರಾಂಶ

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತವಾಗಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತವಾಗಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಜಿ.ಟಿ.ದೇವೆಗೌಡ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ ಎದುರಿಸಲು ಮೈತ್ರಿ ಪಕ್ಷ ಬಿಜೆಪಿಯೊಂದಿಗೆ ಜಂಟಿಯಾಗಿ ಕೆಲಸ ಮಾಡುವ ಸಂಬಂಧ ಮಡಿಕೇರಿಯ ಹೋಟೇಲ್ ವ್ಯಾಲಿವ್ಯೂವ್‌ನಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಮುಂಚೂಣಿ ನಾಯಕರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಬಾವುಟ ಹಾಕಿಕೊಂಡೆ ಮೈತ್ರಿ ಪಕ್ಷಗಳು ಚುನಾವಣಾ ಪ್ರಚಾರ ಮಾಡುತ್ತೇವೆ ಎಂದ ಜಿಟಿಡಿ, ಜೆಡಿಎಸ್ ನ 18 ಶಾಸಕರು ಪಕ್ಷದೊಂದಿಗೆ ಇದ್ದಾರೆ, ಯಾವುದೇ ಶಾಸಕ ಮತ್ತು ನಾಯಕರು ಜೆಡಿಎಸ್ ಬಿಟ್ಟು ಪಕ್ಷಾಂತರ ಮಾಡಿಲ್ಲ. ಅವರೆಲ್ಲರೂ ಕೂಡ ಜೆಡಿಎಸ್ ಕಟ್ಟಾಳುಗಳು, ಪಕ್ಷ ನಿಷ್ಠರಾಗಿದ್ದಾರೆ. ನರೇಂದ್ರ ಮೋದಿ ಅವರನ್ನು ಮಗದೊಮ್ಮೆ ಪ್ರಧಾನಿ ಮಾಡಬೇಕೆಂದು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದೇವೆ. ಕೊಡಗು ಜಿಲ್ಲೆಯಲ್ಲೂ ಜೆಡಿಎಸ್ ಗೆ ಬಲವಾದ ಭೇರುಗಳಿವೆ. ಈ ಆಧಾರದಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ ಎಂದು ದೇವೇಗೌಡ ಹೇಳಿದರು.

ಜಿಲ್ಲಾಧ್ಯಕ್ಷರ ಆಯ್ಕೆ ಚುನಾವಣೆ ಬಳಿಕ: ಸಾರಾ: ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೋಕಸಭಾ ಚುನಾವಣೆ ಮುಗಿಯುವವರೆಗೂ ಆಯ್ಕೆ ಇಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ ಸ್ಪಷ್ಟನೆ ನೀಡಿದ್ದಾರೆ. ಸಭೆಯಲ್ಲಿ ಈ ಕುರಿತು ಮಾತನಾಡಿದ ಸಾರಾ ಇಂದು ಕೋರ್ ಕಮಿಟಿಗೆ ಮಾತ್ರ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಚುನಾವಣೆ ಮುಗಿದ 15 ದಿನಗಳ ಬಳಿಕವಷ್ಟೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಲಾಗುವುದು ಎಂದರು.

ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ.ರವಿ, ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಈ ಸಂಧರ್ಭ ಉಪಸ್ಥಿತರಿದ್ದರು.

ಜೆಡಿಎಸ್ ಬಿಜೆಪಿ ಮೈತ್ರಿ ಮೊದಲೇ ಇದ್ದಿದ್ದರೆ ಕಾಂಗ್ರೆಸ್ ಪಕ್ಷವೇ ಇರುತ್ತಿರಲಿಲ್ಲ: ಮಂಡ್ಯದಿಂದ ಕುಮಾರಸ್ವಾಮಿ ಸಂಸದರಾಗುದು ಖಚಿತ ಎಂದು ಹೇಳಿರುವ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮೊದಲೇ ಚುನಾವಣೆಗಳಲ್ಲಿ ಇರುತ್ತಿದ್ದರೆ ಕಾಂಗ್ರೆಸ್ ಪಕ್ಷವೇ ಇರುತ್ತಿರಲಿಲ್ಲ ಎಂದು ವ್ಯಂಗ್ಯ ಮಾಡಿದರು.

ಮಡಿಕೇರಿಯಲ್ಲಿ ನಡೆದ ಜೆಡಿಎಸ್ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ ಕುಮಾರಸ್ವಾಮಿ ಅತ್ಯಧಿಕ ಬಹುಮತದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವುದರೊಂದಿಗೆ ಪ್ರಾದೇಶಿಕ ಪಕ್ಷದ ಸಂಸತ್ ಸದಸ್ಯರಾಗಿ ಕುಮಾರಸ್ವಾಮಿ ಲೋಕಸಭೆ ಪ್ರವೇಶಿಸುವುದು ನಿಶ್ಚಿತ ಎಂದ ಸಾರಾ ಮಂಡ್ಯ ,ಮೈಸೂರು - ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಜಯಗಳಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.