ಸಾರಾಂಶ
ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಕರ ಜೊತೆ ವಿದ್ಯಾರ್ಥಿಗಳು ಅತಿ ಪ್ರಯಾಸದಿಂದ ಇತರ ಕಾಲೇಜುಗಳಿಗೆ ಹೋಗುತ್ತಿರುವುದರಿಂದ ಈ ಭಾಗದ ವಿದ್ಯಾರ್ಥಿಗಳ ಅತ್ಯಮೂಲ್ಯ ಕಲಿಕಾ ಸಮಯ ತಿರುಗಾಟದಲ್ಲಿಯೇ ಕಳೆದು ಹೋಗುತ್ತಿದೆ. ಇದರಿಂದ ಈ ಭಾಗದ ಮಕ್ಕಳ ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಉಳಿಸಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಭೆ ನಡೆಯಿತು.ತೆಂಡೇಕೆರೆ ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ತೆಂಡೇಕೆರೆ ಮತ್ತು ಚಟ್ಟಂಗೆರೆಯಲ್ಲಿ ಪ್ರೌಢಶಾಲೆಗಳಿವೆ. ಮಕ್ಕಳು ಎಸ್ಸೆಸ್ಸೆಲ್ಸಿ ಮುಗಿದ ನಂತರ ಉನ್ನತ ಶಿಕ್ಷಣ ಪಡೆಯಲು ಸರ್ಕಾರ ತೆಂಡೇಕೆರೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಿದೆ. ಆದರೆ, ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿಲ್ಲ. ಬದಲಾಗಿ ಬಸ್ ಪ್ರಯಾಣ ಮಾಡಿ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ದೂರದೂರಿನ ಕಾಲೇಜಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಕರ ಜೊತೆ ವಿದ್ಯಾರ್ಥಿಗಳು ಅತಿ ಪ್ರಯಾಸದಿಂದ ಇತರ ಕಾಲೇಜುಗಳಿಗೆ ಹೋಗುತ್ತಿರುವುದರಿಂದ ಈ ಭಾಗದ ವಿದ್ಯಾರ್ಥಿಗಳ ಅತ್ಯಮೂಲ್ಯ ಕಲಿಕಾ ಸಮಯ ತಿರುಗಾಟದಲ್ಲಿಯೇ ಕಳೆದು ಹೋಗುತ್ತಿದೆ. ಇದರಿಂದ ಈ ಭಾಗದ ಮಕ್ಕಳ ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಪೋಷಕರು ತಮ್ಮ ಮಕ್ಕಳನ್ನು ತೆಂಡೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲಿಸಿ ಕಾಲೇಜು ಸಂಖ್ಯಾ ಕೊರತೆಯಿಂದ ಮುಚ್ಚಿ ಹೋಗದಂತೆ ಎಚ್ಚರ ವಹಿಸುವಂತೆ ಕರೆ ನೀಡಿದರು.ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಕಾಲೇಜನ್ನು ಉಳಿಸಿಕೊಳ್ಳಲು ಈ ಭಾಗದ ಜನಪ್ರತಿನಿಧಿಗಳು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿಲ್ಲ. ಕಾಲೇಜು ಸ್ವಂತ ಕಟ್ಟಡ ಮತ್ತು ಅಗತ್ಯ ಸೌಕರ್ಯ ಹೊಂದಿಲ್ಲ. ಸರ್ಕಾರ ಕಾಲೇಜನ್ನು ಉನ್ನತೀಕರಿಸಿಸೌಲಭ್ಯಗಳನ್ನು ಕಲ್ಪಿಸಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ ಸುತ್ತಮುತ್ತಲ ಗ್ರಾಮಗಳ ಮಕ್ಕಳು ಕಲಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮುಖಂಡರಾದ ಅ.ನಿ ದೇವರಾಜು, ಮಲ್ಕೋನಹಳ್ಳಿ ಜವರಯ್ಯ, ಭೀಮರಾಜು, ಯಡೂರಪ್ಪ, ವಿರೇಶ್, ಅಂಚನಹಳ್ಳಿ ಈರಯ್ಯ, ಮಂಚನಹಳ್ಳಿ ನರಸಿಂಹೇಗೌಡ, ತೆಂಡೇಕೆರೆ ಬಾಲುರಾಜ್, ಚಟ್ಟಂಗೆರೆ ಮಹೇಶ್, ರಮೇಶ್, ಸತೀಶ್, ರವಿ, ಸ್ವಾಮೀಗೌಡ, ಪ್ರಾಂಶುಪಾಲ ಮಂಜುನಾಥ್, ಮುಖ್ಯ ಶಿಕ್ಷಕ ಮುತ್ತುರಾಜು, ಉಪನ್ಯಾಸಕರಾದ ಪ್ರಿಯದರ್ಶಿನಿ, ಮಹೇಶ್, ಶಿವಕುಮಾರ್, ಸತೀಶ್, ಮಹಾದೇವಪ್ಪ, ಮಂಜು ಮಲ್ಲೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.