ನಾಳೆ ಎಸ್ಸಿ, ಎಸ್ಟಿ ಉದ್ಯಮಿದಾರರ ಸಭೆ

| Published : Jul 17 2024, 12:50 AM IST

ಸಾರಾಂಶ

ಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭಾವೀ ಹಾಗೂ ಹಾಲಿ ಕೈಗಾರಿಕೋದ್ಯಮಿಗಳ ಸಭೆಯನ್ನು ಜು.೧೮ರ ಗುರುವಾರ ಬೆಳಗ್ಗೆ ೧೧ ಗಂಟೆಗೆ ನಗರದ ರೋಟರಿ ಭವನದ ಆವರಣದಲ್ಲಿ ಕರೆಯಲಾಗಿದೆ ಎಂದು ಮೈಸೂರು ವಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ ಕೈಗಾರಿಕೋದ್ಯಮಿಗಳು ಕೈಗಾರಿಕಾ ನಿವೇಶನಾ ಹಂಚಿಕೆ ಪಡೆದು ಯೋಜನೆ ಅನುಷ್ಠಾನಗೊಳಿಸಲು ಇರುವ ಹಲವು ಬಗೆಯ ಸಮಸ್ಯೆಗಳ ಬಗ್ಗೆ ಉದ್ಯಮಿಗಳಿಂದ ಜು.೧೮ ರಂದು ನಡೆಯುವ ಸಭೆಯಲ್ಲಿ ಅಹವಾಲು ಸ್ವೀಕರಿಸಲಾಗುವುದು ಎಂದರು. ಸಭೆಯಲ್ಲಿ ಕರ್ನಾಟಕ ದಲಿತ ಉದ್ಯಮಿದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸ್ ಅವರು ಅಹವಾಲುಗಳನ್ನು ಸ್ವೀಕರಿಸಲಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೊದಲ ಪೀಳಿಗೆಯ ಉದ್ದಿಮೆದಾರರು ನಿವೇಶನ ಪಡೆದು ಯೋಜನೆ ಅನುಷ್ಠಾನಗೊಳಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆ ನಿಟ್ಟಿನಲ್ಲಿ ಅವರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದರು.ಚಾಮರಾಜನಗರದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲಿ ಈಗಾಗಲೇ ೧೪೦ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರು ನಿವೇಶನ ಪಡೆದಿದ್ದು ಯೋಜನೆ ಅನುಷ್ಟಾನಗೊಳಿಸಲು ಹಲವು ತೊಡಕುಗಳಿವೆ. ಈ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲಾಗುವುದು. ಅವು ರಾಜ್ಯ ಮಟ್ಟದಲ್ಲಿ ಇದ್ದರೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದರು. ಸಂಘವು ಸುಮಾರು ೧೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಅತಿ ಸಣ್ಣ , ಸಣ್ಣ ಮಧ್ಯಮ ಉದ್ಯಮಗಳ ಸಮಸ್ಯೆಗಳನ್ನು ಬಗೆಹರಿಸಗುವುದು ಎಂದರು.

ಗುರುವಾರ ನಡೆಯುವ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೆ.ಐ.ಎ.ಡಿ.ಬಿ, ಕೆಎಸ್‌ಎಸ್‌ಐಡಿಬಿ, ಕೆಎಸ್‌ಎಫ್‌ಸಿ, ರಾಷ್ಟ್ರೀಕೃತ ಬ್ಯಾಂಕುಗಳು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜವಳಿ ಇಲಾಖೆ, ರೇಷ್ಮೆ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುವುದು. ಈ ಇಲಾಖೆಗಳಿಗೆ ಸಂಬಂಧಪಟ್ಟ ಅಹವಾಲುಗಳು ಇದ್ದಲ್ಲಿ ಉದ್ಯಮಿದಾರರು ಲಿಖಿತ ರೂಪದಲ್ಲಿ ನೀಡಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಶಂಕರ, ಸಂಯೋಜಕ ಎನ್.ನಾಗಯ್ಯ, ಉದ್ಯಮಿಗಳಾದ ಮಂಜುನಾಥ್, ಶ್ರೀನಿವಾಸ್, ಬಾಲರಾಜು, ಕುಮಾರಸ್ವಾಮಿ ಇದ್ದರು.