ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯದಲ್ಲಿ ಭ್ರಷ್ಚಾಚಾರ, ಲೂಟಿಕೋರತನ ಮಿತಿ ಮೀರಿದ್ದು ಅದನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಆರೋಪಿಸಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸಗಳಾಗಿಲ್ಲ. ಜನರ ಮೇಲೆ ತೆರಿಗೆ ಹೊರೆ ಹೇರುತ್ತಿರುವುದಲ್ಲದೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರು, ಬಡವರು ತತ್ತರಿಸುವಂತೆ ಮಾಡಿರುವುದೆ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಆರುವರೆ ಕೋಟಿ ಜನ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಹೊಸಪೇಟೆಯಲ್ಲಿ ನಡೆಯುತ್ತಿರುವುದು ಸಾಧನಾ ಸಮಾವೇಶವಲ್ಲ. ಲೂಟಿಕೋರರ ಸಮಾವೇಶ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರು ಲೂಟಿ ಹೊಡೆಯುತ್ತಿದ್ದಾರೆ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 40 ಪರ್ಸೆಂಟೆ ಕಮಿಷನ್ ಸರ್ಕಾರ ಎನ್ನುತ್ತಿದ್ದ ಕಾಂಗ್ರೆಸ್ ಈಗ 60 ಪರ್ಸೆಂಟ್ ಕಮಿಷನ್ ಹೊಡೆಯುತ್ತಿದೆ. ಕಾಮಗಾರಿಗಳನ್ನೆ ನಡೆಸದೆ ಸುಳ್ಳು ಬಿಲ್ ಮಾಡಿಕೊಂಡು ಹಣ ಗುಳುಂ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅಭಿವೃದ್ಧಿಯಾಗಿದ್ದನ್ನು ಬಿಟ್ಟರೆ ಕಾಂಗ್ರೆಸ್‍ನಿಂದ ಗುರುತರವಾದ ಒಂದು ಕೆಲಸವೂ ಆಗಿಲ್ಲ. ಹದಿನಾರು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ರಾಜ್ಯದ ಯಾವ ಕ್ಷೇತ್ರಗಳಿಗೂ ನಯಾ ಪೈಸೆ ಬಿಡುಗಡೆಗೊಳಿಸುತ್ತಿಲ್ಲ ಎಂದು ಕಿಡಿ ಕಾರಿದರು.
ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಎಂಟು ಸಾವಿರ ಕೋಟಿ ರು.ಗಳನ್ನು ಬಿಡುಗಡೆಗೊಳಿಸಿದ್ದರು. ಈಗ ಅದು 23 ಸಾವಿರ ಕೋಟಿ ರು.ಗಳಿಗೆ ಏರಿದೆ. ಕೇಂದ್ರ ಸರ್ಕಾರದ ಮೇಲೆ ನೆಪ ಹೇಳಿಕೊಂಡು ಭದ್ರಾ ಮೇಲ್ಡಂಡೆ ಯೋಜನೆ ಮೂಲೆಗುಂಪು ಮಾಡಿರುವ ರಾಜ್ಯ ಸರ್ಕಾರ ಮೊದಲು ತನ್ನ ಪಾಲಿನ ಹಣ ಖರ್ಚು ಮಾಡಿ ಯೋಜನೆಯನ್ನು ಪೂರ್ಣಗೊಳಿಸಲಿ. ಸಾಧಕ-ಬಾಧಕಗಳನ್ನು ನೋಡಿಕೊಂಡು ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಿದೆ. ಚಿತ್ರದುರ್ಗ-ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆಗೊಳಿಸಲಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಒತ್ತಾಯಿಸಿದರು.ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತೇವೆ ಎಂದು ಸಮಾವೇಶಕ್ಕೆ ಜನರ ಕರೆದೊಯ್ಯುವ ಕೆಲಸಕ್ಕೆ ಅಧಿಕಾರಿಗಳ ನಿಯೋಜಿಸಲಾಗಿದೆ. ಕಾಂಗ್ರೆಸ್ ಕಾರ್ಯರ್ತರಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಭಂಡತನದ ಸರ್ಕಾರ ಎಂದೂ ಅಧಿಕಾರದಲ್ಲಿ ಇರಲಿಲ್ಲ. ಅಭಿವೃದ್ದಿ ಮಾನದಂಡಗಳ ಮರೆಯಲಾಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಗರ ಮಂಡಲ ಅಧ್ಯಕ್ಷ ಲೋಕೇಶ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಮಾಧ್ಯಮ ಸಹ ಸಂಚಾಲಕ ಛಲವಾದಿ ತಿಪ್ಪೇಸ್ವಾಮಿ, ಯಶವಂತ್, ಕಿರಣ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ರಾಜ್ಯ ಸರ್ಕಾರದ ಆಡಳಿತ ವೈಖರಿ ಖಂಡಿಸಿ ಮುದ್ರಿಸಲಾದ ಬಿತ್ತಿ ಪತ್ರಗಳನ್ನು ಇದೇ ಸಂದರ್ಭದಲ್ಲಿ ಶಾಸಕ ಎಂ.ಚಂದ್ರಪ್ಪ ಬಿಡುಗಡೆ ಮಾಡಿದರು.