ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಪ್ರವಾಸಿಗರಿಗೆ ಹಿಂದೂ, ಮುಸ್ಲಿಂ ಬಾಂಧವರು ಶುಕ್ರವಾರ ನುಡಿನಮನ ಅರ್ಪಿಸಿದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಜವಾಬ್ದಾರಿಯುತ ನಾಗರಿಕರ ಧ್ವನಿ ವತಿಯಿಂದ ನಗರದ ಚಿಕ್ಕಗಡಿಯಾರ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಂ ಮಾತನಾಡಿ,
ಜಮ್ಮು ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗವಾಗಿದೆ. ದೇಶದ ಹಿತ ದೃಷ್ಟಿಯಿಂದ ಇಲ್ಲಿ ಎಷ್ಟು ಬಿಗಿ ಭದ್ರತೆ ಒದಗಿಸಿದರು ಕೂಡ ಕಡಿಮೆಯೇ. ಈ ಒಂದು ಭಾಗ ಭಯೋತ್ಪಾದಕರ ತಾಣ ಇಲ್ಲಿಗೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ ಎನ್ನುವ ವಿಚಾರ ಗೊತ್ತಿದ್ದರೂ ಕೂಡ ಒಬ್ಬನೇ ಒಬ್ಬ ಯೋಧನನ್ನು ಪೋಲೀಸರನ್ನು ನೇಮಕ ಮಾಡಿಲ್ಲ ಅಂದ್ರೇ ಇದು ಕೇಂದ್ರ ಸರ್ಕಾದದ ಬೇಜವಾಬ್ದಾರಿಯಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.ಪಹಲ್ಗಾಮ್ ದಾಳಿಯಲ್ಲಿ 30ಕ್ಕೂ ಹೆಚ್ಚು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ, ಅವರ ಕುಟುಂಬಗಳು ಅನಾಥವಾಗಿದೆ, ಮದುವೆಯಾದ ಕೇವಲ ಒಂದು ವಾರಕ್ಕೆ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಹೀಗಾಗಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದರ ಜವಾಬ್ದಾರಿಯನ್ನು ಹೊರಬೇಕು. ಭಾರತದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭಯೋತ್ಪಾದನೆ ಮಟ್ಟಹಾಕಲು ಏನೇ ಕ್ರಮ ಕೈಗೊಂಡರು ಕೂಡ ಪ್ರತಿಯೊಬ್ಬ ಭಾರತೀಯನು ಕೂಡಾ ಕೈಜೋಡಿಸುತ್ತಾನೆ ಇನ್ನು ಮುಂದಾದರು ಈ ರೀತಿಯ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದರು.ಮಾಜಿ ಮೇಯರ್ ಆರೀಫ್ ಹುಸೇನ್ ಮಾತನಾಡಿ, ಇಂತಹ ಘಟನೆಗಳು ಭಾರತದಲ್ಲಿ ನಡೆಯಬಾರದಿತ್ತು, ಭಾರತ ದೇಶ ಮೋದಿಯವರ ಕೈಯಲ್ಲಿ ಸುಭದ್ರವಾಗಿದೆ ಎಂದು ಹೇಳುತ್ತಾರೆ, ಹೀಗಿರುವಾಗ 30 ಅಮಾಯಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೆ? ಇದು ತುಂಬಾ ನೋವಿನ ಸಂಗತಿ. ಇಂತಹ ಭಯೋತ್ಪಾದಕರನ್ನು ಕೂಡಲೇ ಮಟ್ಟಹಾಕಬೇಕು, ದೇಶದೊಳಗೆ ಅಕ್ರಮವಾಗಿ ನುಗ್ಗುವ ನುಸುಳುಕೋರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಮಡಿದ ಕರ್ನಾಟಕದ ಮಧುಸೂದನ್ ರಾವ್, ಮಂಜುನಾಥ್ ರಾವ್, ಭರತ್ ಭೂಷಣ್ ಮೂವರು ಪ್ರವಾಸಿಗರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎಫ್.ಎಂ. ಕಲೀಮ್, ಜಾವಿದ್ ಪಾಷಾ, ಕೆ. ರಘುರಾಮ್ ವಾಜಪೇಯಿ, ಲೋಕೇಶ್ ಮಾದಾಪುರ, ಅಸಾದುಲ್ಲ, ಎನ್. ಭಾಸ್ಕರ್, ದ್ಯಾವಪ್ಪ ನಾಯಕ, ಬಗವಾದಿ ನಾರಾಯಣಪ್ಪ, ಅಕ್ರಂ, ಸಿಂಧುವಳ್ಳಿ ಅಕ್ಬರ್, ಆಜಾದ್ ಪಾಷಾ, ಶಿವಶಂಕರ ಮೂರ್ತಿ, ರೋಹಿತ್ ಮಂಜುಳಾ ಸೌಂಡ್ಸ್, ದೀಪಕ್, ಶಿಂಷಾ ದಿನೇಶ್, ರಾಜೇಶ್, ರವಿ ನಾಯಕ್, ಕೇಶವ್, ಇಬ್ರೀಷ್ ಮೋಹನ್, ಶೋಭಾ, ಶಾಂತಾ ಮೊದಲಾದವರು ಇದ್ದರು.ಉಗ್ರರ ದಾಳಿ ಖಂಡಿಸಿ ಮೊಟಾರ್ ಡ್ರೈವಿಂಗ್ ಶಾಲೆ ಮಾಲೀಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಮೈಸೂರುಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಮೈಸೂರು ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದವರು ಪ್ರತಿಭಟಿಸಿದರು.
ಪಶ್ಚಿಮ ಆರ್.ಟಿ.ಒ ಮುಂಭಾಗದಿಂದ ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೈಗೆ ಕಪ್ಪು ಬಟ್ಟೆ ಧರಿಸಿ ಉಗ್ರರ ದಾಳಿ ಖಂಡಿಸಿದರು. ಅಲ್ಲದೆ, ಮೇಣದ ಬತ್ತಿ ಹಚ್ಚಿ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು.ಮಿನಿ ಸ್ವಿಡ್ಜರ್ ಲ್ಯಾಂಡ್ ಎಂದೇ ಹೆಸರಾದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ನಿಜಕ್ಕೂ ಖಂಡನೀಯ. ಧರ್ಮಾಂಧತೆ ತುಂಬಿಕೊಂಡ ಉಗ್ರರು ಪ್ರವಾಸಿಗರ ಧರ್ಮ ಯಾವುದು ಎಂದು ಕೇಳಿ ಗುಂಡಿಕ್ಕಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿರುವ ಉಗ್ರರನ್ನು ಸುಮ್ಮನೆ ಬಿಡಬಾರದು. ಕೂಡಲೇ ಕೇಂದ್ರ ಸರ್ಕಾರ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ಸದೆ ಬಡಿಯಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎಂ. ಆನಂದ್ ಕುಮಾರ್, ಕಾರ್ಯದರ್ಶಿ ಟಿ.ಎಂ. ಶ್ರೀನಿವಾಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.