ಶಿವನ ಕ್ಷೇತ್ರಗಳಲ್ಲಿ ಭಕ್ತರ ಸ್ಮರಣೆ

| Published : Mar 09 2024, 01:34 AM IST / Updated: Mar 09 2024, 03:33 PM IST

ಸಾರಾಂಶ

ಯಾಣ, ಗೋಕರ್ಣ, ಮುರ್ಡೇಶ್ವರ, ಸಹಸ್ರಲಿಂಗ ಒಳಗೊಂಡು ವಿವಿಧ ಶಿವನ ಸನ್ನಿಧಾನಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ ಸಹಸ್ರ ಸಹಸ್ರ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯಿತು.

ಕಾರವಾರ: ಜಿಲ್ಲೆಯ ಯಾಣ, ಗೋಕರ್ಣ, ಮುರ್ಡೇಶ್ವರ, ಸಹಸ್ರಲಿಂಗ ಒಳಗೊಂಡು ವಿವಿಧ ಶಿವನ ಸನ್ನಿಧಾನಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ ಸಹಸ್ರ ಸಹಸ್ರ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. 

ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯಿತು.ಯಾಣದ ಕಾಲಭೈರವೇಶ್ವರ, ಬನವಾಸಿಯ ಮಧುಕೇಶ್ವರ, ಸಹಸ್ರಲಿಂಗ, ದಾಂಡೇಲಿಯ ಕವಳದ ಈಶ್ವರ, ಆತ್ಮಲಿಂಗಗಳಾದ ಗೋಕರ್ಣ, ಮುರ್ಡೇಶ್ವರ, ಗುಣವಂತೇಶ್ವರ, ಶೆಜ್ಜೇಶ್ವರ, ಧಾರೇಶ್ವರ ಒಳಗೊಂಡು ವಿವಿಧ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಕರಾವಳಿ ತಾಲೂಕಿನಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಸಮುದ್ರಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. 

ಪ್ರತಿವರ್ಷದಂತೆ ಪ್ರಸಕ್ತ ವರ್ಷ ಕೂಡಾ ಗೋಕರ್ಣದ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಹಾಬಲೇಶ್ವರನ ದರ್ಶನಕ್ಕೆ ಸ್ಥಳೀಯರೊಂದೇ ಅಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿದ್ದರು.

ವಿವಿಧ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂತಾಮೃತಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಒಳಗೊಂಡು ವಿವಿಧ ಪೂಜೆಗಳನ್ನು ವೈದಿಕರ ಸಮ್ಮುಖದಲ್ಲಿ ನೆರವೇರಿಸಲಾಯಿತು. 

ಕಡಲತೀರದಲ್ಲೇ ಮರಳಿನ ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಆತ್ಮಲಿಂಗಗಳಲ್ಲಿ ಒಂದಾದ ಮುರ್ಡೇಶ್ವರದಲ್ಲಿ ಕೂಡಾ ದೇವರ ದರ್ಶನಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. 

ಜಿಲ್ಲಾಡಳಿತ ಆಯೋಜಿಸಿದ್ದ ಅಹೋರಾತ್ರಿ ಶಿವಭಕ್ತಿ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯದ ಪ್ರಸಿದ್ಧ ಕಲಾವಿದರಿಂದ ವಿವಿಧ ಗಾಯನ, ವಾದನ, ನೃತ್ಯಗಳು ಜರುಗಿತು. ಸಾವಿರಾರು ಜನರು ಕಾರ್ಯಕ್ರಮ ವೀಕ್ಷಣೆ ಮಾಡಿದರು.

ದಾಂಡೇಲಿಯ ಕವಳದ ಗುಹೆಯಲ್ಲಿ ಇರುವ ಈಶ್ವರಲಿಂಗ ಕೂಡಾ ಪ್ರಸಿದ್ಧಿಯಾಗಿದ್ದು, ಶಿವರಾತ್ರಿಯಲ್ಲಿ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. 

ಹೀಗಾಗಿ ಸಾವಿರಾರು ಜನರು ಶಿವರಾತ್ರಿಯಂದು ಆಗಮಿಸಿ ಶ್ರೀದೇವರ ದರ್ಶನ ಪಡೆದರು. ಶಿರಸಿ ತಾಲೂಕಿನ ಸಹಸ್ರಲಿಂಗದಲ್ಲಿ ಇರುವ ಶಿವಲಿಂಗಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. 

ಬನವಾಸಿಯ ಮಧುಕೇಶ್ವರ ದೇವಾಲಯದಲ್ಲೂ ಪೂಜೆ-ಪುನಸ್ಕಾರ ನಡೆಯಿತು. ಕುಮಟಾ ತಾಲೂಕಿನ ಯಾಣದ ಭೈರವೇಶ್ವರ ದೇವರ ದರ್ಶನಕ್ಕೆ ಬೇರೆ ಬೇರೆ ಊರುಗಳಿಂದ ಭಕ್ತರು ಆಗಮಿಸಿದ್ದರು.