ಕುದುರೆ ಕೊಂದು, ತಂದೆ,ತಾಯಿ ಮೇಲೆ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ

| Published : Jul 31 2024, 01:10 AM IST

ಕುದುರೆ ಕೊಂದು, ತಂದೆ,ತಾಯಿ ಮೇಲೆ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳಕ್ಕೆ ಬಂದ ಪೊಲೀಸರಿಗೂ ಕೊಡಲಿ ತೋರಿಸಿ ಹೆದರಿಸಿದ್ದಾನೆ. ಬಳಿಕ ಪೊಲೀಸರು ಮನವೊಲಿಸಿ ವಶಕ್ಕೆ ಪಡೆದು ಧಾರವಾಡದ ಡಿಮಾನ್ಸ್‌ಗೆ ಚಿಕಿತ್ಸೆಗೆ ಸೇರಿಸಿದ್ದಾರೆ

ರೋಣ: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ತನ್ನ ತಂದೆ ತಾಯಿಯ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೇ, ಜಮೀನೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುದುರೆಯನ್ನು ಸಹ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ತಾಲೂಕಿನ ಬೆಳವಣಿಗೆ ಗ್ರಾಮದಲ್ಲಿ ಇತ್ತೀಚಿಗೆ ನಡೆದಿದೆ.

ಶಿವಪ್ಪ ತಟ್ಟಿ ಈ ರೀತಿ ದುರ್ವರ್ತನೆ ತೋರಿದ ವ್ಯಕ್ತಿ. ಈ ರೀತಿ ಘಟನೆ ಮಾಡಿದ ಬಳಿಕ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಕೊಡಲಿ ಹಿಡಿದು ಕುಳಿತಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೂ ಕೊಡಲಿ ತೋರಿಸಿ ಹೆದರಿಸಿದ್ದಾನೆ. ಬಳಿಕ ಪೊಲೀಸರು ಮನವೊಲಿಸಿ ವಶಕ್ಕೆ ಪಡೆದು ಧಾರವಾಡದ ಡಿಮಾನ್ಸ್‌ಗೆ ಚಿಕಿತ್ಸೆಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮೂರು ವರ್ಷಗಳಿಂದ ಶಿವಪ್ಪ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಗ್ರಾಮದ ಸಮೀಪದ ಹೊಲದಲ್ಲಿ ಕುರಿಗಾರರು ಕುರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುದುರೆಯನ್ನು ಕೊಡಲಿಯಿಂದ ಕೊಂದು ಮನೆಯಲ್ಲಿ ಅವಿತು ಕುಳಿತಿದ್ದಾನೆ. ಆಗ ಮಗನನ್ನು ಪ್ರಶ್ನಿಸಲು ಬಂದ ತಂದೆ ಷಣ್ಮುಖಪ್ಪ, ತಾಯಿ ಗೌರವ್ವಳ ಮೇಲೆ ಹಲ್ಲೆ ಮಾಡಿದ್ದಾನೆ. ತಂದೆ ಷಣ್ಮುಖಪ್ಪನ ತಲೆಗೆ ಗಂಭೀರ ಗಾಯಗಳಾಗಿದೆ.

ಘಟನೆ ಹಿನ್ನೆಲೆ ಗ್ರಾಮಸ್ಥರು ತೀವ್ರ ಭಯಭೀತರಾಗಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ 112 ಎಮರ್ಜೆನ್ಸಿ ಪೊಲೀಸ್ ಸಿಬ್ಬಂದಿ ಎಸ್‌.ಡಿ.ಗೌಡರ್‌, ಎಚ್.ಎಸ್. ಡೊಣ್ಣೆಗುಡ್ಡ ಹಾಗೂ ಮಹೇಶ ಚಕ್ಕಸಾಲಿ ಗಂಟೆಗೂ ಹೆಚ್ಚು ಕಾಲ ಮನೆಯ ಅಡುಗೆ ಕೊಣೆಯಲ್ಲಿ ಕೊಡಲಿ ಹಿಡಿದು ಕುಳಿತಿದ್ದ ಶಿವಪ್ಪನನ್ನು ಮನವೊಲಿಸಿ ಕರೆದೊಯ್ದಿದ್ದಾರೆ.

7 ದಿನಗಳ ಹಿಂದೆ ತಾಯಿ ಗೌರವ್ವಳ ಮೇಲೆ ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಎಡಗೈ ಮುರಿದ್ದಾನೆ. ಹೀಗೆ ಮಾನಸಿಕ ಅಸ್ವಸ್ಥ ನಿತ್ಯ ಒಂದಿಲ್ಲೊಂದು ಅಟ್ಟಹಾಸ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಬೆಳವಣಿಕೆ ಗ್ರಾಮಕ್ಕೆ ತೆರಳಿ, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಅನೇಕ ದಿನಗಳಿಂದ ಕುರಬರ ಓಣಿಯ ಕೆಲವರೊಂದಿಗೆ ಅನಗತ್ಯ ಗಲಾಟೆ ಮಾಡುವುದಲ್ಲದೇ ಸಿಕ್ಕಸಿಕ್ಕವರಿಗೆ ಸುಖಾಸುಮ್ಮನೇ ಬೈದಾಡುತ್ತಿದ್ದ, ವಾರದ ಹಿಂದೆ ತನ್ನ ತಾಯಿಗೆ ಬಡಿಗೆಯಿಂದ ಹೊಡೆದು ಕೈ ಮುರಿದಿದ್ದಾನೆ. ಭಾನುವಾರ ಮಧ್ಯಾಹ್ನ ಕುರಿಗಾರರ ಕುದುರೆಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ. ಮನೆಗೆ ಬಂದು ತಂದೆ, ತಾಯಿಯನ್ನು ಹೊಡೆದಿದ್ದಾನೆ. ತನ್ನನ್ನು ಹಿಡಿಯಲು ಬಂದಿದ್ದ ಪೊಲೀಸರ ಮೇಲೂ ಕೊಡಲಿ ಬೀಸಿ ಹಲ್ಲೆಗೆ ಮುಂದಾಗಿದ್ದಾನೆ. ಇದೆಲ್ಲವನ್ನು ನೋಡಿದ ನಮಗೆ ಭಯವಾಗಿದೆ ಎಂದು ಬೆಳವಣಕಿ ಗ್ರಾಮಸ್ಥರು ತಿಳಿಸಿದ್ದಾರೆ.