ಸಾರಾಂಶ
ಶಿಗ್ಗಾಂವಿ: ಮಕ್ಕಳ ಶೈಕ್ಷಣಿಕ ಜೀವನಕ್ಕೆ ಕೇವಲ ಅಂಕ ಪಟ್ಟಿಯೊಂದೆ ಪ್ರಮುಖ ಗುರಿಯಾಗಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ರಾಜಕೀಯ, ಸಾಮಾಜಿಕ ಸೇವೆಗಳಲ್ಲಿ ಇಂದಿನ ಯುವಕರು ತಮ್ಮನ್ನು ತಾವು ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.ಶಿಗ್ಗಾಂವಿ ಪಟ್ಟಣದ ದಿಶಾ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ೨೧ನೇ ಶತಮಾನದ ಭವ್ಯ ಭಾರತ ಸೃಷ್ಟಿಯಾಗಬೇಕಾದರೆ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂದಿನ ಯುವಕರು ತಮ್ಮ ಜೀವನದ ಏರುಪೇರುಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಿಗೆ ಸಾಧನೆಯ ಗುರಿ ಇರಬೇಕು. ಒಳ್ಳೆಯ ಆಲೋಚನೆಯಿಂದ, ನಿರ್ದಿಷ್ಟ ಗುರಿಯೊಂದಿಗೆ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಸತತವಾಗಿ ಪ್ರಯತ್ನ ಮಾಡುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕೆಂದು ವಿದ್ಯಾರ್ಥಿಗಳಲ್ಲಿ ಕರೆ ನೀಡಿದರು. ದಿಶಾ ಇಂಟರ್ ನ್ಯಾಶನಲ್ ಶಾಲೆಗೆ ಸಂಸ್ಥಾಪಕ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಮಕ್ಕಳ ಬದುಕಿನ ಬದಲಾವಣೆಗೆ ಶಿಕ್ಷಣ ಬಹಳ ಮುಖ್ಯ, ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಮಕ್ಕಳ ಮೌಲ್ಯಯುತ ಪ್ರಜೆಗಳನ್ನಾಗಿ ಬೆಳೆಸುವ ಕಾರ್ಯ ಪಾಲಕರದ್ದಾಗಿರುತ್ತದೆ. ಮಕ್ಕಳಿಗೆ ಕೇವಲ ಓದಿನ ಒತ್ತಡ ಹಾಕದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಬೋಧನೆ ಮಾಡುವ ಅವಶ್ಯಕತೆ ಬಹಳ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ವಿಜಯಲಕ್ಷ್ಮಿ ಬೇವಿನಮರದ, ಪ್ರಾಚಾರ್ಯ ಸಂತೋಷ ಹೆಚ್, ದಿಶಾ ಶಿಕ್ಷಣ ಸಂಸ್ಥೆಯ ಪಿಆರ್‌ಓ ಶಶಾಂಕ ಕೌಜಲಗಿ, ದಿಶಾ ಶಿಕ್ಷಣ ಸಂಸ್ಥೆಯ ಸಿಇಒ ಅಂಬಿಕಾ ಎಚ್., ಕೃಷ್ಣಕುಮಾರ ಎನ್., ದೀಪಿಕಾ ಅರ್ ಡಿ. ಸೇರಿದಂತೆ ಇತರರಿದ್ದರು.