ಸಾರಾಂಶ
ಬ್ಯಾಡಗಿ: ಸಾಲ ವಸೂಲಿಗೆ ತೆರಳಿದ್ದ 5 ಸ್ಟಾರ್ ಮೈಕ್ರೋ ಫೈನಾನ್ಸ್ ನೌಕರನೊಬ್ಬ ಸಾಲಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ರ ಗ್ರಾಮದ ನೂರಾರು ಜನರು ಪಟ್ಟಣದ ಬನಶಂಕರಿ ದೇವಸ್ಥಾನದ ಬಳಿಯಿರುವ ಕಚೇರಿಗೆ ತೆರಳಿ ದಾಂಧಲೆ ನಡೆಸಿದರಲ್ಲದೇ ಕೂಡಲೇ ತಪ್ಪಿತಸ್ಥ ನೌಕರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಹಲ್ಲೆ ನಡೆದ ಘಟನೆ ಕೆಂಗೊಂಡ ಜಾತ್ರೆಯಲ್ಲಿ 3 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ಛತ್ರ ಗ್ರಾಮದ ಯುವಕ ಪರಮೇಶಪ್ಪ ಲಮಾಣಿ ಎಂಬ ವ್ಯಕ್ತಿ ಎಗ್ಗರೈಸ್ ವ್ಯಾಪಾರಕ್ಕೆಂದು ತನ್ನ ಮನೆಯನ್ನು ಒತ್ತೆಯನ್ನಿಟ್ಟು ರು. 4.5 ಲಕ್ಷ ಸಾಲ ಪಡೆದಿದ್ದಾನೆ. ಈ ಪೈಕಿ ಒಟ್ಟು 84ರಲ್ಲಿ 17 ಕಂತುಗಳನ್ನು ತುಂಬಿದ್ದಾನೆ.18ನೇ ಕಂತು ತುಂಬಲು ಕೇವಲ 2 ದಿವಸ ವಿಳಂಬವಾಗಿದೆ. ಅದಾಗ್ಯೂ ಫೈನಾನ್ಸ್ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೊಪ್ಪದ 5 ಸ್ಟಾರ್ ಮೈಕ್ರೋ ಫೈನಾನ್ಸ್ ನೌಕರ ಬೀರೇಶ ಎಂಬಾತ ಸುಮಾರು 25ರಿಂದ 30 ಜನರೊಂದಿಗೆ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾಗಿ ಆರೋಪಿಸಿದರು.
ಮೂವರಿಗೆ ಗಾಯ: ಜಾತ್ರೆಯಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಇದರಲ್ಲಿ ಪರಮೇಶಪ್ಪನ ಕುಟುಂಬದ ಮೂವರಿಗೆ ತೀವ್ರ ತರಹದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸಂತ್ರಸ್ತರೊಂದಿಗೆ ಗ್ರಾಮಸ್ಥರು ಫೈನಾನ್ಸಿಗೆ ಬೀಗ ಜಡಿಯಲು ಶನಿವಾರ ಮುಂದಾದರು. ಆದರೆ, ಮ್ಯಾನೇಜರ್ ಹಾಗೂ ನೌಕರರಿಬ್ಬರೂ ನಾಪತ್ತೆಯಾಗಿದ್ದು, 3 ದಿನದಿಂದ ಕೈಗೆ ಸಿಗದಂತೆ ಸತಾಯಿಸಿದ್ದು ಆಕ್ರೋಶಕ್ಕೆ ಇನ್ನಷ್ಟು ಕಾರಣವಾಗಿದೆ.ಸ್ಥಳಕ್ಕೆ ಪೋಲಿಸರು: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್ಐ ಅರವಿಂದ ಹಾಗೂ ಸಿಬ್ಬಂದಿಗಳು ಪ್ರತಿಭಟನಾ ನಿರತರನ್ನು ಹಾಗೂ ಬ್ಯಾಂಕ್ ಸಿಬ್ಬಂದಿಗಳನ್ನು ಸಮಾಧಾನಪಡಿಸಿ ತಮ್ಮ ಹೇಳಿಕೆಗಳನ್ನು ನೀಡುವಂತೆ ಠಾಣೆಗೆ ಕರೆದೊಯ್ದರು.ನಿಯಮ ಬಾಹಿರ ವಸೂಲಿ: ಸದರಿ ಬ್ಯಾಂಕ್‌ನಲ್ಲಿ ನಾನು 2ನೇ ಬಾರಿ ಸಾಲ ಪಡೆದುಕೊಂಡಿದ್ದೇನೆ. ಒಂದು ಬಾರಿಯೂ ನಿಗದಿತ ಸಮಯ ತಪ್ಪಿಸಲಿರಲಿಲ್ಲ, ಅಷ್ಟಕ್ಕೂ ಮನೆಯನ್ನು ಒತ್ತೆಯಿಟ್ಟು (ಮಾರ್ಟಗೇಜ್ ಲೋನ್) ಸಾಲ ಪಡೆದಿದ್ದೇನೆ, ಸಾಲ ಕೊಟ್ಟ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡುವುದು ನಮ್ಮ ಕರ್ತವ್ಯ. ಆದರೆ ಕೇವಲ ಎರಡು ದಿವಸ ತಡವಾಗಿದ್ದಕ್ಕೆ ಗುಂಪುಗೂಡಿಕೊಂಡು ಹಲ್ಲೆ ನಡೆಸಿದ್ದು ತಪ್ಪು, ಕಾನೂನು ರೀತ್ಯ ಅವರು ವಸೂಲಿ ಮಾಡಿಕೊಳ್ಳಲು ನನ್ನದೇನೂ ತಕರಾರಿಲ್ಲ. ನೌಕರ ಬೀರೇಶ ಹಲ್ಲೆ ನಡೆಸಿದ್ದರಿಂದ ಮನಸ್ಸಿಗೆ ನೋವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು ಛತ್ರ ಗ್ರಾಮದ ಸಾಲಗಾರ ಪರಮೇಶಪ್ಪ ಲಮಾಣಿ ಹೇಳಿದರು.