ಇಂಡಿಗನತ್ತಕ್ಕೆ ಮುಖ ಮಾಡದ ಸಚಿವ, ಶಾಸಕ

| Published : May 21 2024, 01:45 AM IST

ಸಾರಾಂಶ

ಮೂಲಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ಧ್ವಂಸ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮ ದೇಶದ ಗಮನ ಸೆಳೆದರೂ ಸ್ಥಳೀಯ ಜನಪ್ರತಿನಿದಿಗಳ ಗಮನ ಸೆಳೆಯದಿರುವುದು ವಿಪರ್ಯಾಸವಾಗಿದೆ.

ಜಿ.ದೇವರಾಜ ನಾಯ್ಡು ಕನ್ನಡಪ್ರಭ ವಾರ್ತೆ ಹನೂರು

ಮೂಲಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ಧ್ವಂಸ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮ ದೇಶದ ಗಮನ ಸೆಳೆದರೂ ಸ್ಥಳೀಯ ಜನಪ್ರತಿನಿದಿಗಳ ಗಮನ ಸೆಳೆಯದಿರುವುದು ವಿಪರ್ಯಾಸವಾಗಿದೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕಾಡೊಳಗಿನ ಗ್ರಾಮಗಳಾದ ಇಂಡಿಗನತ್ತ, ಮೆಂದಾರೆ ಗ್ರಾಮಗಳತ್ತ ಶಾಸಕ ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಘಟನೆ‌ ಬಳಿಕ ಇಲ್ಲಿ ಮುಖ ಮಾಡದಿರುವುದು ಇಲ್ಲಿನ ಜನರಿಗೆ ಮೂಲಸೌಕರ್ಯ ದೂರದ ಬೆಟ್ಟದಂತೆ ಗೋಚರಿಸುತ್ತಿದೆ.

ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದ ಇಲ್ಲಿನ ಜನರು ಬಳಿಕ ಮತಗಟ್ಟೆ ಧ್ವಂಸ ಮಾಡಿದ್ದರು. ಘಟನೆಯಿಂದ 46 ಮಂದಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಇಷ್ಟೆಲ್ಲಾ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೌಜನ್ಯಕ್ಕೂ ಭೇಟಿ ನೀಡಿಲ್ಲ, ಶಾಸಕ ಮಂಜುನಾಥ್ ಅವರೂ ಇತ್ತ ತಲೆ ಹಾಕದರಿವುದು ಪಕ್ಷಾತೀತವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯರು ಕಣ್ಣೀರು:

ಬಂಧನಕ್ಕೊಳಪಟ್ಟು ಜಾಮೀನಿನ ಮೇಲೆ ಹೊರಬಂದರೂ ಇಲ್ಲಿನ ಮಹಿಳೆಯರು, ಪುರುಷರ ಕಣ್ಣಲ್ಲಿ ಭಯ ಹೋಗಿಲ್ಲ. ನಾವೆಲ್ಲಾ ನಿರಪರಾಧಿಗಳು, ಗಲಾಟೆಯಲ್ಲಿ ನಮ್ಮ ಪಾತ್ರವೇ ಇಲ್ಲ ಆದರೂ ಬಂಧಿಸಿ ಕರೆದೊಯ್ದಿದ್ದಾರೆ ಎಂದು ರತ್ನಮ್ಮ ಎಂಬಾಕೆ ಕಣ್ಣೀರು ಹಾಕಿ ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡರು. ನಮಗೆ ವಿದ್ಯುತ್ ಸೌಲಭ್ಯ ಇಲ್ಲಾ, ಕುಡಿಯುವ ನೀರಿನ ಸೌಕರ್ಯ ಇಲ್ಲಾ, ರಸ್ತೆ ವ್ಯವಸ್ಥೆ ಇಲ್ಲಾ ಈಗಲಾದರೂ ಕನಿಷ್ಠ ಸೌಕರ್ಯ ಕೊಡಿ, ಇನ್ನಾದರೂ ನೆಮ್ಮದಿಯಾಗಿ ಎರಡು ಹೊತ್ತು ಊಟ ಮಾಡಲು ಅವಕಾಶ ಮಾಡಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಮುಖಂಡ ನೆರವು:

ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಬಂಧಿತರಾಗಿದ್ದ 46 ಮಂದಿಯನ್ನು ಜಾಮೀನಿನ ಮೇಲೆ ಹನೂರು ಬಿಜೆಪಿ ಮುಖಂಡ ಜನಧ್ವನಿ ವೆಂಕಟೇಶ್ ಬಿಡುಗಡೆ ಮಾಡಿಸಿ ಕರೆತಂದಿದ್ದಾರೆ. ಕನಿಷ್ಠ ಮೂಲಸೌಕರ್ಯ ಕಲ್ಪಿಸಿಕೊಡಲು ತಾನೂ ಕೂಡ ನಿಮ್ಮೊಂದಿಗೆ ಧ್ವನಿ ಎತ್ತಲಿದ್ದು, ಮಕ್ಕಳ ಶಿಕ್ಷಣದ ವೆಚ್ಚ ವಹಿಸಿಕೊಳ್ಳುವ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಕಳೆದ 23 ದಿನಗಳಿಂದಲೂ ಸಹ ಗ್ರಾಮದಲ್ಲಿರುವ ನಿವಾಸಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಅವರ ಕಡೆಯಿಂದ ಮಾಡಲಾಗಿದೆ ಹಸಿವಿನಿಂದ ಬಳಲಿ ಬೆಂಡಾಗಿದ್ದ ಗ್ರಾಮದ ಜನತೆಗೆ ಆಸರೆಯಾಗಿ ಜನಧ್ವನಿ ವೆಂಕಟೇಶ್ ಮುಂದಾಗಿರುವುದು ಗ್ರಾಮಸ್ಥರಲ್ಲಿ ಆಶಯ ವ್ಯಕ್ತವಾಗಿದೆ. ಜೊತೆಗೆ ಅವರು ನಮ್ಮ ನೆರವಿಗೆ ಧಾವಿಸಿರುವುದಕ್ಕೆ ನಾವು ಅವರಿಗೆ ಋಣಿಯಾಗಿರುತ್ತೇವೆ ಎಂದು ಕಾರಾಗೃಹದಿಂದ ಬಿಡುಗಡೆಯಾದ ಗ್ರಾಮದ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಘಟನೆಯ ವಿವರ ತಿಳಿಯದ ಹಿರಿಯ ನಾಗರಿಕರು:ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ಚುನಾವಣೆ ಮತದಾನ ಬಹಿಷ್ಕಾರ ವೇಳೆ ನಡೆದ ಇವಿಎಂ ಧ್ವಂಸ ಪ್ರಕರಣ ಮತ್ತು ಮತಗಟ್ಟೆ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ 46 ಜನರ ಮೇಲೆ ದೂರು ದಾಖಲಾಗಿರುವುದು ಈ ಘಟನೆಯ ವಿವರವೇ ತಿಳಿದಿಲ್ಲ ಎನ್ನುತ್ತಾರೆ. ಆದರೆ ನಮಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ, ಕಿವಿ ಸಹ ಕೇಳುವುದಿಲ್ಲ. ಹೀಗಾಗಿ ಇಲ್ಲಿನ ಸಮಸ್ಯೆ ಇರುವುದು ಎಲ್ಲರಿಗೂ ತಿಳಿದಿದೆ. ಈಗಲಾದರೂ ಸಂಬಂಧಪಟ್ಟವರು ನಮ್ಮ ಗ್ರಾಮದ ಸ್ಥಿತಿಗತಿ ಬಗ್ಗೆ ತಿಳಿದು ನಮ್ಮವರನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.

ಮಗಳ ಹೆರಿಗೆಯ ದಿನವೇ ಜೈಲುಗಟ್ಟಿದ ಮಹಿಳೆಯ ಅಳಲು:

ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆಗೆ ಗ್ರಾಮದ ಮಹಿಳೆ ಘಟನೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರತ್ನಮ್ಮ ಮತದಾನ ವೇಳೆ ಹೆಂಗಸರು ಮಕ್ಕಳು ಎನ್ನದೆ ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ ನಿರಪರಾಧಿಗಳಾದ ನಮ್ಮನ್ನು ಬಂಧಿಸಿ ಜೈಲಿಗೆ ಕಳಿಸಿದರು. ಅಂದು ನನ್ನ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡು ಪರದಾಡಿದ ಹಿನ್ನೆಲೆ ಗ್ರಾಮಸ್ಥರು ನನ್ನ ಮಗಳನ್ನು ತಮಿಳುನಾಡಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಮಗಳ ಹೆರಿಗೆ ದಿನವೇ ಜೈಲು ಪಾಲು ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ನಮ್ಮ ಗ್ರಾಮವನ್ನು ಕಾಪಾಡುವಂತೆ ಸಂತೈಸಿ ಧೈರ್ಯ ತುಂಬಲು ತೆರಳಿದ್ದ ಜನಧ್ವನಿ ವೆಂಕಟೇಶ್ ಅವರೊಂದಿಗೆ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡರು. ಮಹಿಳೆಯನ್ನು ಸಂತೈಸಿ ನಿಮ್ಮ ನೆರವಿಗೆ ಎಂದೆಂದಿಗೂ ನಾನು ಇರುತ್ತೇನೆ. ಗ್ರಾಮದಲ್ಲಿರುವ ನೀವು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಎಲ್ಲಾ ಸಂದರ್ಭದಲ್ಲಿ ನಾನು ನಿಮ್ಮ ನೆರವಿಗೆ ಇರುತ್ತೇನೆ ಎಂದು ಜನಧ್ವನಿ ವೆಂಕಟೇಶ್ ಭರವಸೆ ನೀಡಿದರು.