ಸಾರಾಂಶ
ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಅಮೀನಗಡಸಮೀಪದ ಇಳಕಲ್ಲ ತಾಲೂಕು ಗುಡೂರ (ಎಸ್.ಸಿ) ಗ್ರಾಮದಲ್ಲಿ ವೈಯುಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳದ ಅಭಾವವಿದೆ. ಕಾರಣ ಬಹುತೇಕ ಮಹಿಳೆಯರು ಗ್ರಾಮ ಪಂಚಾಯಿತಿಯಿಂದ ನಿರ್ಮಿತಗೊಂಡ ಸಾಮೂಹಿಕ ಮಹಿಳಾ ಶೌಚಾಲಯ ಬಳಸಬೇಕೆಂದರೇ ಅಲ್ಲಿಯೋ ನೀರು, ಬೆಳಕು ಹಾಗೂ ಸ್ವಚ್ಛತೆ ಮರೀಚಿಕೆಯಾಗಿ ಮಹಿಳೆಯರು ಬಯಲು ಬಹಿರ್ದೆಸೆಯತ್ತ ಮುಖ ಮಾಡುವಂತಾಗಿದೆ.
ಬಾದಾಮಿ, ಗಜೇಂದ್ರಗಡದ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಗ್ರಾಪಂನಿಂದ ನಿರ್ಮಿತಗೊಂಡ ಸಾಮೂಹಿಕ ಮಹಿಳಾ ಶೌಚಾಲಯ ಗುಡ್ಡಕ್ಕೆ ಹೊಂದಿಕೊಂಡಿದೆ. ಸ್ವಚ್ಛತೆ, ನೀರು ಹಾಗೂ ರಾತ್ರಿ ದೀಪದ ವ್ಯವಸ್ಥೆವಿರದೇ ಅನಿರ್ವಾಯವಾಗಿ ಮಹಿಳೆಯರು ತಂಬಿಗೆ ಹಿಡಿದು ಬಹಿರ್ದೆಸೆಗೆ ತೆರಳುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರಿಗೆ ಹಲವು ಬಾರಿ ಗಮನಕ್ಕೆ ತಂದರು ನಿರ್ಲಕ್ಷಿಸುತ್ತಿದ್ದಾರೆ ಎಂದು ಮಹಿಳೆಯರು ದೂರುತ್ತಾರೆ.ಅಲ್ಲದೇ ರಾತ್ರಿ ವೇಳೆ ಮಹಿಳೆಯರು ಈ ಶೌಚಾಲಕ್ಕೆ ಹೋಗಲು ಹಿಂಜರಿಯುತ್ತಾರೆ. ಇದನ್ನೇ ಕಾರಣವಾಗಿಟ್ಟುಕೊಂಡ ಮದ್ಯವ್ಯಸನಿಗಳು, ಮದ್ಯದಬಾಟಲು, ನೀರಿನ ಬಾಟಲ್, ಪ್ಲಾಸ್ಟಿಕ್ ಕಪ್, ಉಪ್ಪಿನಕಾಯಿ, ಕುರುಕುರೆ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋಗಿ ಪಕ್ಕದಲ್ಲೇ ಗುಡ್ಡಕ್ಕೆ ಹತ್ತುವ ಮೆಟ್ಟಿಲುಗಳು, ಗುಡ್ಡದಕಲ್ಲುಗಳ ಮೇಲೆ ಅಲ್ಲಿಯೇ ಗುಡ್ಡದ ಕಲ್ಲುಬಂಡೆಗಳ ಮೇಲೆ ಮದ್ಯಸೇವಿಸಿ, ಬಾಟಲಿಗಳನ್ನು ಎಸೆದು ಪರಿಸರ ನಾಶಗೊಳಿಸುತ್ತಿದ್ದಾರೆ. ಈ ಬಗ್ಗೆ ಪರಿಸರ ಪ್ರೇಮಿಗಳು, ನಾಗರೀಕರು ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಎದುರಗಡೆಯೇ ಹೊರವಲಯ ಪೊಲೀಸ್‌ಠಾಣೆ ಇದ್ದರೂ ಸಿಬ್ಬಂದಿ ಕಂಡೂಕಾಣದಂತಿದ್ದಾರೆ.
ಹಲವಾರು ವರ್ಷಗಳಿಂದ ಇಲ್ಲಿ ಸಾಮೂಹಿಕ ಮಹಿಳಾ ಶೌಚಾಲಯವಿದ್ದರೂ ಮೂಲಭೂತ ಸೌಲಭ್ಯವಿಲ್ಲದೇ ತೊಂದರೆಯಾಗಿದೆ. ಸರಿಯಾಗಿ ನೀರು ಸರಬರಾಜಿಲ್ಲ, ಒಳಚರಂಡಿ, ರಾತ್ರಿ ದೀಪವೂ ಇಲ್ಲ. ನಾವೇ ತಂಬಿಗೆ ಹಿಡಿದುಹೋಗಬೇಕು. ಕೆಲವುಬಾರಿ ಮುಖ್ಯರಸ್ತೆಗೆ ಬಂದು ಕುಳಿತುಕೊಳ್ಳವ ಪರಿಸ್ಥಿತಿ ಇದೆ. ನಮ್ಮ ಸ್ಥಳದಲ್ಲೇ ವೈಯುಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳದ ಅಭಾವವಿದ್ದ ಕಾರಣ ಬಹುತೇಕ ಮಹಿಳೆಯರು ಇದ್ದನ್ನೇ ಬಳಸುತ್ತಿದ್ದೇವೆ. ಈ ಬಗ್ಗೆ ವಾರ್ಡ್ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ತೀವ್ರತೊಂದರೆಯಾಗಿದೆ.ಸಾಹಿರಬಾನು, ಶಾಂತವ್ವ, ಗ್ರಾಮಸ್ಥರು
ಮಹಿಳಾ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿದರೂ ಇದನ್ನು ಸದುಪಯೋಗಿಸಿಕೊಳ್ಳದ ಕಾರಣ, ದುರವಸ್ಥೆಗೆ ಹೋಗುತ್ತಿದೆ. ಬಹುತೇಕ ಮಹಿಳೆಯರು ಶೌಚಾಲಯ ಬಳಸಿಕೊಳ್ಳುತ್ತಿಲ್ಲ. ಮಹಿಳೆಯರು ವೈಯುಕ್ತಿಕ ಶೌಚಾಲಯ ಕಟ್ಟಿಕೊಳ್ಳುವುದಾದರೆ ಸರಕಾರ ಗ್ರಾಪಂ ಮೂಲಕ ಸಹಾಯಧನ ನೀಡುತ್ತಿದ್ದು ಸದ್ಬಸಿಕೊಳ್ಳಬೇಕು. ಸದ್ಯಕ್ಕೆ ಶೌಚಾಲಯ ದುರುಪಯೋಗವಾಗುತ್ತಿರುವ ಕಾರಣ ಗ್ರಾಪಂ ಅದನ್ನು ಕೆಡವಿ, ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಚಿಂತಿಸುತ್ತಿದೆ.ಬಸವರಾಜ ರೇವಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ