ಸಾರಾಂಶ
ಸರ್ಕಾರದಿಂದ ರಾಸುಗಳ ಚಿಕಿತ್ಸೆಗೆ ಪ್ರತಿ ತಾಲೂಕಿಗೆ ಒಂದರಂತೆ ೧೩ ಆ್ಯಂಬುಲೆನ್ಸ್ ನೀಡಲಾಗಿದ್ದು, ೪ ತಾಲೂಕಿಗಳಿಗೆ ವೈದ್ಯರು ನಿಯುಕ್ತರಾಗಿಲ್ಲ. ಉಳಿದೆಡೆ ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದೆ.
ಕಾರವಾರ:
ಸರ್ಕಾರದಿಂದ ರಾಸುಗಳ ಚಿಕಿತ್ಸೆಗೆ ಪ್ರತಿ ತಾಲೂಕಿಗೆ ಒಂದರಂತೆ ೧೩ ಆ್ಯಂಬುಲೆನ್ಸ್ ನೀಡಲಾಗಿದ್ದು, ೪ ತಾಲೂಕಿಗಳಿಗೆ ವೈದ್ಯರು ನಿಯುಕ್ತರಾಗಿಲ್ಲ. ಉಳಿದೆಡೆ ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದೆ.ಕುಮಟಾ, ಅಂಕೋಲಾ, ಕಾರವಾರ, ಜೋಯಿಡಾ ತಾಲೂಕಿಗೆ ವೈದ್ಯರ ನೇಮಕಾತಿವಾಗಿಲ್ಲ. ದಾಂಡೇಲಿ, ಹೊನ್ನಾವರ ತಾಲೂಕಿನ ಆ್ಯಂಬುಲೆನ್ಸ್‌ಗೆ ಶೀಘ್ರದಲ್ಲೇ ವೈದ್ಯರ ನೇಮಕಾತಿಯಾಗಲಿದೆ. ಪುಣೆಯ ಎಡುಸ್ಪಾರ್ಕ್ ಇಂಟರ್‌ನ್ಯಾಷಶನಲ್ ಪ್ರೈವೇಟ್ ಲಿ. ಕಂಪನಿಗೆ ಟೆಂಡರ್ ಆಗಿದ್ದು, ಅವರೇ ವೈದ್ಯರು, ಸಿಬ್ಬಂದಿ ನೇಮಕಾತಿ, ಔಷಧಗಳ ಪೂರೈಕೆ ಒಳಗೊಂಡು ಎಲ್ಲ ಅಗತ್ಯತೆಯನ್ನು ಪೂರೈಸಲಿದ್ದಾರೆ. ಸರ್ಕಾರದ ಅಥವಾ ಪಶು ಸಂಗೋಪನಾ ಇಲಾಖೆಯ ವ್ಯಾಪ್ತಿಗೆ ನೇರವಾಗಿ ಈ ಆ್ಯಂಬುಲೆನ್ಸ್‌ಗಳು ಬರುವುದಿಲ್ಲ. ಜಿಲ್ಲೆಯ ಪ್ರಸ್ತುತ ಪ್ರತಿ ತಾಲೂಕಿಗೆ ಒಂದರಂತೆ ೧೨ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮತ್ತು ಯಲ್ಲಾಪುರದಲ್ಲಿರುವ ಪಶು ವೈದ್ಯಕಿಯ ಸೇವಾ ಇಲಾಖೆಯ ಪಾಲಿಕ್ಲಿನಿಕ್‌ಗೆ 1 ವಾಹನ ಸೇರಿದಂತೆ ಒಟ್ಟೂ ೧೩ ವಾಹನಗಳಲ್ಲಿ ೯ ಪಶುವೈದ್ಯರು ಮತ್ತು ೧೩ ಪಶು ವೈದ್ಯ ಸಹಾಯಕರು ಹಾಗೂ ವಾಹನ ಚಾಲಕರು ಈ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಉತ್ತರ ಕನ್ನಡ ಗುಡ್ಡಗಾಡು ಪ್ರದೇಶ, ಗ್ರಾಮಾಂತರ ಪ್ರದೇಶ ಹೆಚ್ಚು ಹೊಂದಿದ್ದು, ರಾಸುಗಳಿಗೆ ರೋಗ ಬಂದರೆ, ಅನಾರೋಗ್ಯಕ್ಕೆ ಒಳಗಾದರೆ ಸಕಾಲದಲ್ಲಿ ಅವುಗಳಿಗೆ ಚಿಕಿತ್ಸೆ ಕೊಡಿಸಲು ತೊಂದರೆ ಉಂಟಾಗುತ್ತಿದೆ. ದೂರದ ಪಶು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಅತ್ಯಂತ ಪ್ರಯಾಸದ ಕೆಲಸವಾಗಿದೆ. ಇದನ್ನು ತಪ್ಪಿಸುವ ಸಲುವಾಗಿಯೇ ರೋಗಗ್ರಸ್ತ ಪಶುಗಳು ಇರುವ ಸ್ಥಳಕ್ಕೆ ಆಗಮಿಸಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆಯನ್ನು ಉತ್ತರ ಕನ್ನಡದಲ್ಲಿ ಆರಂಭಿಸಲಾಗಿದೆ. ಹೈನುಗಾರರು ಉಚಿತ ಟೋಲ್ ಫ್ರೀ ಸಂಖ್ಯೆ ೧೯೬೨ಗೆ ಕರೆ ಮಾಡುವ ಮೂಲಕ ಉಚಿತವಾಗಿ ಈ ಸೇವೆ ಪಡೆಯಬಹುದಾಗಿದೆ.ರೋಗಗ್ರಸ್ತ ಜಾನುವಾರುಗಳ ಮಾಲೀಕರು ಬೆಳಗ್ಗೆ ೯ರಿಂದ ಸಂಜೆ ೫ರ ವರೆಗೆ ಉಚಿತ ಸಹಾಯವಾಣಿ ಕರೆ ಮಾಡಿ, ತಮ್ಮ ಹೆಸರು, ವಿಳಾಸ ಹಾಗೂ ಜಾನುವಾರುಗಳಿಗೆ ಇರುವ ತೊಂದರೆ ಬಗ್ಗೆ ತಿಳಿಸಿದ ನಂತರ ಸಮೀಪದ ಸಂಚಾರಿ ಪಶು ಚಿಕಿತ್ಸಾ ವಾಹನಕ್ಕೆ ಈ ಬಗ್ಗೆ ಮಾಹಿತಿ ರವಾನೆಯಾಗಿ, ಪಶು ವೈದ್ಯರು, ಪಶು ವೈದ್ಯ ಸಹಾಯಕರು ಸದರಿ ವಿಳಾಸಕ್ಕೆ ಆಗಮಿಸಿ ಉಚಿತ ಚಿಕಿತ್ಸೆ ಹಾಗೂ ಅಗತ್ಯ ಔಷಧ ನೀಡಲಿದ್ದಾರೆ.ಉಚಿತ ಪಶು ಚಿಕಿತ್ಸಾ ವಾಹನಗಳ ಮೂಲಕ ಜಿಲ್ಲೆಯ ಗುಡ್ಡಗಾಡು ಮತ್ತು ಅತ್ಯಂತ ಗ್ರಾಮೀಣ ಪ್ರದೇಶಗಳಲ್ಲೂ ಸಹ ರೋಗಗ್ರಸ್ತ ಜಾನುವಾರುಗಳಿಗೆ ಅವಶ್ಯವಿರುವ ಚಿಕಿತ್ಸೆ ಮತ್ತು ಔಷಧಗಳನ್ನು ಸ್ಥಳಕ್ಕೇ ತೆರಳಿ ಉಚಿತವಾಗಿ ಒದಗಿಸಲಾಗುತ್ತಿದೆ. ಜಾನುವಾರುಗಳ ಮಾಲೀಕರು ೧೯೬೨ಗೆ ಕರೆ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾನುವಾರುಗಳಿಗೆ ವಿಮಾ ಸೌಲಭ್ಯ ಜನವರಿ ೨೦೨೪ರಿಂದ ಆರಂಭಗೊಂಡಿದ್ದು ಹೈನುಗಾರರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಮೋಹನಕುಮಾರ ತಿಳಿಸಿದ್ದಾರೆ.