ಪ್ರಭುತ್ವದ ನಡೆ ಅವಲೋಕನಕ್ಕೆ ಅಣಕು ಯುವ ಸಂಸತ್ತು ಪೂರಕ

| Published : Sep 21 2024, 01:54 AM IST

ಪ್ರಭುತ್ವದ ನಡೆ ಅವಲೋಕನಕ್ಕೆ ಅಣಕು ಯುವ ಸಂಸತ್ತು ಪೂರಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಭುತ್ವದ ನಡೆ ಅವಲೋಕನಕ್ಕೆ ಅಣಕು ಯುವ ಸಂಸತ್ತು ಪೂರಕವೆಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಮಲ್ಲೇಶ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರಭುತ್ವದ ನಡೆ ಅವಲೋಕನಕ್ಕೆ ಅಣಕು ಯುವ ಸಂಸತ್ತು ಪೂರಕವೆಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಮಲ್ಲೇಶ್ ಹೇಳಿದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ತು ಸ್ಪರ್ಧೆ-2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಮಕ್ಕಳಿಗಾಗಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಅಣಕು ಯುವ ಸಂಸತ್ ಕಾರ್ಯಕ್ರಮ ತುಂಬಾ ಪ್ರಶಂಸನೀಯ. ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ಶಾಸಕಾಂಗದ ಮಹತ್ವ ಅರಿಯಬೇಕು ಎಂದರು.ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು. ಆ ಪ್ರಜೆಗಳೇ ಮುಂದಿನ ರಾಜಕರಣಿಗಳು ಆಗಬಹುದು. ದೇಶದ ಅಭಿವೃದ್ಧಿ ರಾಜಕಾರಣಿಗಳ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಸಂಸತ್ ಪ್ರವೇಶಿಸುವ ನಮ್ಮ ಪ್ರತಿನಿಧಿಗಳು ಪ್ರಜ್ಞಾವಂತರಾದರೆ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ. ಇಂತಹ ಪ್ರಜ್ಞಾವಂತ ರಾಜಕಾರಣಿಗಳನ್ನು ರೂಪಿಸಲು ಈ ರೀತಿಯ ಕಾರ್ಯಕ್ರಮಗಳು ಸ್ಫೂರ್ತಿದಾಯಕ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಾಂಶುಪಾಲ ನರಸಿಂಹಮೂರ್ತಿ, ಪ್ರಜಾಪ್ರಭುತ್ವ ಬೇರುಗಳು ಗಟ್ಟಿಯಾಗಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿ. ಸಂಸತ್ ಸ್ಪರ್ಧೆಗಳಲ್ಲಿ ಯುವಕರು ಚರ್ಚೆಗೆ ಕೈಗೆತ್ತಿಕೊಂಡ ವಿಷಯ ಹಾಗೂ ಮಂಡನೆ ಮಾಡಿದ ರೀತಿ ಕುತೂಹಲವಾಗಿದೆ ಎಂದರು.

ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಅನುಪ್ ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಎಸ್. ಪ್ರಾಂಶುಪಾಲ ಲೋಕೇಶ್, ದೇವರಾಜ್, ಉಪನ್ಯಾಸಕ ಕೆ. ತಿಪ್ಪೇಸ್ವಾಮಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಸುಷ್ಮಿತ ಜೆ. ಪ್ರಾರ್ಥಿಸಿದರೆ, ಬುಡೇನ್ ಸಾಬ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವೇದಿಕೆ ಅಧ್ಯಕ್ಷ ಡಾ.ಜೆ. ಮೋಹನ್ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಹಿರಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿಯಾ ಜೆ(ಪ್ರಥಮ), ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಯಿಷಾ (ದ್ವಿತೀಯ) ಹಾಗೂ ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಬಿ. (ತೃತೀಯ) ಸ್ಥಾನ ಪಡೆದರು.