ತರಕಾರಿ ಬೆಳೆದು ಮಾದರಿಯಾದ ರೈತ

| Published : Aug 11 2025, 12:30 AM IST

ಸಾರಾಂಶ

ಮಳೆಗಾಲದಲ್ಲಿ ಜೌಗು ಭೂಮಿಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿಯಲ್ಲಿ ಚಿಂತೆಗೀಡಾಗುವ ರೈತರಿಗೆ ವಿಭಿನ್ನ ಪದ್ಧತಿಯ ಮೂಲಕ ತಾಲೂಕಿನ ಎಲಿವಾಳ ಗ್ರಾಮದ ರೈತನೋರ್ವ ತರಕಾರಿ ಬೆಳೆದು ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.

- ಎಚ್.ಕೆ.ಬಿ. ಸ್ವಾಮಿಕನ್ನಡಪ್ರಭ ವಾರ್ತೆ ಸೊರಬ

ಮಳೆಗಾಲದಲ್ಲಿ ಜೌಗು ಭೂಮಿಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿಯಲ್ಲಿ ಚಿಂತೆಗೀಡಾಗುವ ರೈತರಿಗೆ ವಿಭಿನ್ನ ಪದ್ಧತಿಯ ಮೂಲಕ ತಾಲೂಕಿನ ಎಲಿವಾಳ ಗ್ರಾಮದ ರೈತನೋರ್ವ ತರಕಾರಿ ಬೆಳೆದು ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ತಾಲೂಕು ಹಿರೆಕೆರೂರು ಹೋಬಳಿ ಚಿಕ್ಕೆರೂರು ಕೆರೆ ತುಂಬಿ ಕೋಡಿ ಬೀಳುತ್ತದೆ. ಇದರಿಂದ ಸೊರಬ ತಾಲೂಕಿನ ಗಡಿಭಾಗದ ಎಲಿವಾಳ ಗ್ರಾಮದ ಕೃಷಿ ಜಮೀನು ಜೌಗಿನಿಂದ ಕೃಷಿಗೆ ತೊಡಕುಂಟಾಗುತ್ತವೆ. ಬೆಳೆ ಬರುವ ಜಾಗವೆಲ್ಲ ಜವುಳು, ಬೆಳೆ ಮೇಲೇಳಲು ಅವಕಾಶವೇ ಇಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮದ ಸೋಮಶೇಖರಯ್ಯ ಸುತ್ತೂರು ಮಠ ಎಂಬ ರೈತ ಜವುಳು ಜಾಗದಲ್ಲಿ ಮಲ್ಚಿಂಗ್ ಶೀಟ್, ಕುರಿಗೊಬ್ಬರ, ಕುರಿ ಮೂತ್ರ ಬಳಸಿ ಸುಮಾರು ಮೂವತ್ತಕ್ಕೂ ಅಧಿಕ ತಳಿ ತರಕಾರಿ ಬೆಳೆಯುವ ಮೂಲಕ ಜವುಳು ಭೂಮಿ ಎಂದು ಕೃಷಿ ಚಟುವಟಿಕೆಯನ್ನೇ ನಿಲ್ಲಿಸಿ ಕೈಕಟ್ಟಿ ಕೂತ ಗ್ರಾಮದ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಬೆಳೆಗಳಿಗೆ ಬರುವ ರೋಗಗಳೆಂದರೆ ಶಿಲೀಂಧ್ರ ರೋಗಗಳು, ಬ್ಯಾಕ್ಟೀರಿಯಾ ರೋಗಗಳು ಮತ್ತು ವೈರಸ್ ರೋಗಗಳು. ಈ ರೋಗಗಳು ಬೆಳೆಗಳ ಇಳುವರಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇವುಗಳಲ್ಲಿ ಬೂದು ಅಚ್ಚು, ಎಲೆ ಚುಕ್ಕೆ ರೋಗ, ಮತ್ತು ಕಾಂಡ ಕೊಳೆತ ರೋಗಗಳು ಸೇರಿವೆ. ಇವು ತೇವ ಮತ್ತು ಹೆಚ್ಚಿನ ತಾಪಮಾನವಿರುವ ವಾತಾವರಣದಲ್ಲಿ ವೇಗವಾಗಿ ಹರಡುತ್ತವೆ. ಬ್ಯಾಕ್ಟೀರಿಯಾ ರೋಗಗಳು ಎಲೆ ಮತ್ತು ಕಾಂಡಗಳಲ್ಲಿ ಕಪ್ಪುಚುಕ್ಕೆಗಳನ್ನು ಉಂಟುಮಾಡುತ್ತವೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ವೈರಸ್ ರೋಗಗಳು ಸಸ್ಯಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಎಲೆಗಳ ಮೇಲೆ ವಿಚಿತ್ರವಾದ ಬಣ್ಣಗಳನ್ನು ಉಂಟುಮಾಡುತ್ತವೆ.

ತಾಲೂಕಿನಾದ್ಯಂತ ಬಹುತೇಕ ಎಲ್ಲೆಡೆ ವಾಡಿಕೆಗಿಂತಲೂ ಅಧಿಕ ಮಳೆಯ ಪರಿಣಾಮ ತಾಲೂಕು ಮಲೆನಾಡು ಪ್ರದೇಶದಲ್ಲಿ ಜೌಗಿನಿಂದ ಬೆಳೆಗಳಿಗೆ ಹಾನಿ ಸಂಭವಿಸುತ್ತವೆ. ರೈತಾಪಿ ಬದುಕು ಸಾಕಪ್ಪೋ ಸಾಕು ಎಂದು ನಿತ್ರಾಣರಾಗಿರುವ ಸಂದರ್ಭದಲ್ಲಿ ಸೋಮಶೇಖರಯ್ಯ ಸುತ್ತೂರುಮಠ ಎಂಬ ಕೃಷಿಕ ಎಲಿವಾಳ ಗ್ರಾಮದ ರೈತ ಸಮೂಹಕ್ಕೆ ಹೊಸ ಚೈತನ್ಯ ತುಂಬಿದ್ದಾರೆ.

ಉಪ ಕಸುಬಾಗಿ ಕುರಿ ಸಾಕಣಿಕೆ, ಆಕಳು ಸಾಕಣಿಕೆ, ಎಣ್ಣೆ ಗಾಣ, ಉಪ್ಪಿನಕಾಯಿ ಉತ್ಪಾದನೆಯ ಗೃಹಕೈಗಾರಿಕೆ ಹೊಂದಿರುವ, ನಾಟಿ ವೈದ್ಯಕೀಯ, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡು ಶೂನ್ಯ ಬಂಡವಾಳದ ಸಮಗ್ರ ಕೃಷಿಕರಾಗಿರುವ ಸೋಮಶೇಖರಯ್ಯ ಅವರ ೨೦ ಗುಂಟೆ (ಮುಕ್ಕಾಲು ಎಕರೆ) ಭೂಮಿಯಲ್ಲಿ ಸೇವಂತಿಗೆ ಹೂವು ಸೇರಿದಂತೆ ಮಿಶ್ರಬೆಳೆಯಾಗಿ ಅಡಕೆ, ಬಾಳೆ, ತೊಗರಿ, ಹೀರೆಕಾಯಿ, ಬಹುಮಹಡಿ ಪದ್ಧತಿಯಲ್ಲಿ ಟೊಮ್ಯಾಟೊ, ಮೆಣಸು, ಬೀನ್ಸ್, ಸೌತೆ ಮೊದಲಾದ ತರಕಾರಿ ಬೆಳೆ ಬೆಳೆದಿದ್ದಾರೆ. ಪಾರಂಪರಿಕ ಕೃಷಿಗಿಂತಲೂ ಹೆಚ್ಚಿನ ಬೆಳೆ, ಬೆಲೆ ಪಡೆಯುತ್ತಿದ್ದಾರೆ. ಇವರ ಕೃಷಿ ಬದುಕಿಗೆ ಮಗ ಸಿದ್ದಲಿಂಗು ಸಾಥ್ ನೀಡುತ್ತಿದ್ದು, ಸಹಜ ಕೃಷಿಯತ್ತ ಅವರ ಚಿತ್ತ ಸಾಗಿದೆ.

ಕೆರೆ ಕೋಡಿಯಿಂದ ಜವುಳಿನಿಂದ ಕೂಡಿದ ಜಮೀನಿನಲ್ಲಿ ಭೂಮಿ ಹದ ಮಾಡುವ ಮೊದಲು ೧ ಎಕರೆಗೆ ಒಂದೂವರೆ ಟ್ರಾಕ್ಟರ್ ಕುರಿಗೊಬ್ಬರ ಹಾಕಿ, ೧೮ ಲೀ. ನೀರಿಗೆ ೫೦ ಎಂ.ಎಲ್. ಕುರಿ ಮೂತ್ರ ಮತ್ತು ೧ ಕೋಳಿ ಮೊಟ್ಟೆ ಬೆರೆಸಿ ಸಿಂಪಡಿಸಬೇಕು. ಆಗ ಭೂಮಿಯ ಉಷ್ಣತೆ ಹೆಚ್ಚಾಗಿ ಜೌಗು ನೀರು ಭೂಮಿಯ ಮೇಲ್ಪದರಕ್ಕೆ ಬರದೇ ಇಂಗುತ್ತದೆ. ಈ ಕಾರಣದಿಂದ ಬೆಳೆಗೆ ಯಾವುದೇ ರೋಗ ತಾಕುವುದಿಲ್ಲ. ಇಳುವರಿಯೂ ಹೆಚ್ಚಾಗುತ್ತದೆ. ತಾವು ವಾರಕ್ಕೆ ೩ ಬಾರಿ ಕೋಯ್ಲ ಮಾಡಿದಾಗ ೬೦ ಕೆ.ಜಿ. ಬೀನ್ಸ್, ೧೨ ಬಾಕ್ಸ್ ಟಮೊಟೋ, ೫೦ ಕೆ.ಜಿ. ಸೌತೆ ಮತ್ತು ೫೦ ಕೆ.ಜಿ. ಹಿರೇಕಾಯಿ ಇಳುವರಿ ಬರುತ್ತದೆ.

– ಸೋಮಶೇಖರಯ್ಯ ಸುತ್ತೂರುಮಠ, ಕೃಷಿಕ

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯತೆ ಹೆಚ್ಚುತ್ತಿದ್ದು, ಬಿತ್ತನೆಗೆ ಆದ ಖರ್ಚು ಕೂಡ ಸಿಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಮಶೇಖರಯ್ಯ ಸುತ್ತೂರುಮಠ ಎಂಬ ಕೃಷಿಕ ಹೊಂದಿರುವ ಅಲ್ಪ ಭೂಮಿಯಲ್ಲಿ ವಿವಿಧ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿರುವುದು ಉಳಿದ ರೈತರಿಗೆ ಅನುಕರಣೀಯ.

- ನೇಮಚಂದ್ರ, ತಾಲೂಕು ಕೃಷಿ ಅಧಿಕಾರಿ, ಸೊರಬ

ಮಿಶ್ರ ಬೇಸಾಯ ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾದ ರೈತರಲ್ಲಿ ಸೋಮಶೇಖರಯ್ಯ ಕೂಡ ಒಬ್ಬರು. ತರಹೇವಾರಿ ಬೆಳೆ ಬೆಳೆದು ಮಳೆಗಾಲದಲ್ಲಿಯೂ ಹೆಚ್ಚಿನ ಇಳುವರಿ ಮತ್ತು ಲಾಭವನ್ನು ಗಳಿಸುತ್ತಿದ್ದಾರೆ. ಭೇಟಿ ನೀಡಿದ ರೈತ ಬಾಂಧವರಿಗೆ ಮಾಹಿತಿ, ಅನುಭವ ಹಂಚಿಕೊಳ್ಳುತ್ತ ಮಾದರಿ ರೈತರಾಗಿದ್ದಾರೆ.

– ಬಿ.ಎಲ್. ನವೀನ್, ಸಹಾಯಕ ತೋಟಗಾರಿಕಾ ಅಧಿಕಾರಿ, ಆನವಟ್ಟಿ ಹೋಬಳಿ