ಕೊಡಗಿನಲ್ಲೇ ಮಾದರಿ ರಾಮನವಮಿ: ವಿಜೃಂಭಣೆಯ ರಾಮೋತ್ಸವ ಆಚರಣೆಗೆ ಶ್ರೀ ಕೋದಂಡ ರಾಮೋತ್ಸವ ಸಮಿತಿ ಸಿದ್ಧತೆ

| Published : Mar 14 2025, 12:32 AM IST

ಕೊಡಗಿನಲ್ಲೇ ಮಾದರಿ ರಾಮನವಮಿ: ವಿಜೃಂಭಣೆಯ ರಾಮೋತ್ಸವ ಆಚರಣೆಗೆ ಶ್ರೀ ಕೋದಂಡ ರಾಮೋತ್ಸವ ಸಮಿತಿ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಅದ್ಧೂರಿಯಾಗಿ ಕೊಡಗು ಜಿಲ್ಲೆಯಲ್ಲೇ ಮಾದರಿ ರಾಮೋತ್ಸವ ಆಚರಿಸಲು ತಯಾರಿ ನಡೆಸಿರುವ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಪ್ರಮುಖರು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ರೀರಾಮಚಂದ್ರನಿಗೆ ಮೇಲು ಕೀಳು, ಜಾತಿ ಮತ ಭೇದವಿಲ್ಲ. ರಾಮನ ಈ ಆದರ್ಶವನ್ನು ಮೂಲವಾಗಿರಿಸಿಕೊಂಡು ಸರ್ವ ಸಮುದಾಯದ ಮಂದಿ ಒಗ್ಗೂಡಿ ಶ್ರೀರಾಮ ನವಮಿಯಂದು ಮಡಿಕೇರಿಯ ಮಲ್ಲಿಕಾರ್ಜುನ ನಗರ ಬಡಾವಣೆಯ ಶ್ರೀಕೋದಂಡ ರಾಮ ದೇವಾಲಯದಲ್ಲಿ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯ ರಾಮೋತ್ಸವ ಆಚರಿಸಲು ಸಿದ್ಧತೆ ನಡೆದಿದೆ.ಏ.5 ಮತ್ತು 6ರಂದು ಅದ್ಧೂರಿಯಾಗಿ ಕೊಡಗು ಜಿಲ್ಲೆಯಲ್ಲೇ ಮಾದರಿ ರಾಮೋತ್ಸವವನ್ನು ಆಚರಿಸಲು ತಯಾರಿ ನಡೆಸಿರುವ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಪ್ರಮುಖರು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಶ್ರೀರಾಮ ಮೆಟ್ಟಿದ ಈ ಮಣ್ಣಿನಲ್ಲಿ ಸರ್ವರೂ ಒಗ್ಗಟ್ಟಿನಿಂದ ಜೀವನ ಸಾಗಿಸಬೇಕಾಗಿದೆ. ಸರ್ವ ಜನಾಂಗಗಳ ಶಾಂತಿಯ ತೋಟದ ಹೂವುಗಳು ಶ್ರೀರಾಮನಿಗೆ ಅರ್ಪಣೆಯಾಗಬೇಕಾಗಿದೆ. ಸಮುದಾಯ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಈ ರಾಮೋತ್ಸವದ ಮೂಲಕ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಉದ್ದೇಶದಿಂದ ಪ್ರತಿಯೊಂದು ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೊಸ ಪರಿಕಲ್ಪನೆಯೊಂದಿಗೆ 35ನೇ ವರ್ಷದ ರಾಮೋತ್ಸವವನ್ನು ಆಚರಿಸಲಾಗುತ್ತಿದೆ. ಸುಮಾರು 25 ಲಕ್ಷ ರು. ಗಳನ್ನು ಖರ್ಚು ಮಾಡಲಾಗುತ್ತಿದ್ದು, ಉಪಸಮಿತಿಗಳ ಮೂಲಕ ಎರಡು ದಿನಗಳ ಯಶಸ್ವೀ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಏ.5 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಶ್ರೀ ಕೋದಂಡರಾಮ ದೇವಾಲಯದವರೆಗೆ ರಾಮದೇವರ ಮೆರವಣಿಗೆ ನಡೆಯಲಿದೆ. ಭಜನಾ ತಂಡ, ಚಂಡೆ ವಾದ್ಯ, ವಿವಿಧ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಹಾಗೂ ಭಕ್ತರು ವಾದ್ಯಗೋಷ್ಠಿಗಳೊಂದಿಗೆ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಶ್ರೀ ಕೋದಂಡ ರಾಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಿತಿಯ ಸದಸ್ಯ ಹೆಚ್.ಎನ್.ನಂಜುಂಡ ಅವರು ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಅಧ್ಯಕ್ಷ ಕೆ.ಕೆ.ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಜನೆ ನಡೆಯಲಿದೆ. ವಿವಿಧ ಮಹಿಳಾ ಸಮಿತಿಗಳ ಮುಂದಾಳತ್ವದಲ್ಲಿ ಕಳಸ ಮತ್ತು ಮಹಿಳಾ ತಂಡಗಳ ಮೆರವಣಿಗೆ ಸಾಗಲಿದೆ.ಅಂದು ಸಂಜೆ ಮೆರವಣಿಗೆ ದೇವಾಲಯವನ್ನು ತಲುಪಿದ ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದ್ದು, ಎಲ್ಲಾ ಸಮುದಾಯಗಳ ಸಾಂಪ್ರದಾಯಿಕ ಕಲೆಗಳು ಪ್ರದರ್ಶನಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಏ.5 ಮತ್ತು 6 ರಂದು ಎರಡು ದಿನ ಸಂಜೆ ನಡೆಯಲಿದ್ದು, ಆಸಕ್ತ ತಂಡಗಳು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಮಹೇಶ್ (9663326204) ಅವರನ್ನು ಮಾರ್ಚ್ 25 ರೊಳಗೆ ಸಂಪರ್ಕಿಸುವಂತೆ ಕೆ.ಎಂ.ಗಣೇಶ್ ತಿಳಿಸಿದರು. ಏ.6 ರಂದು ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾಪನಾ ಉತ್ಸವ ಮತ್ತು ರಾಮೋತ್ಸವದ ಪ್ರಯುಕ್ತ ವಿಶೇಷ ಪೂಜೆ ಮತ್ತು ಮಹಾಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಏ.5 ರಂದು ಸಂಜೆ ಮೆರವಣಿಗೆಯ ನಂತರ ಲಘು ಉಪಹಾರವಿರುತ್ತದೆ. ಸುಧಾಕರ್ ಮತ್ತು ತಂಡ ಆಹಾರ ಸಮಿತಿ ನೇತೃತ್ವ ವಹಿಸಿಕೊಂಡಿದೆ ಎಂದರು.ಕಳೆದ 34 ವರ್ಷಗಳಿಂದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ರಾಮನವಮಿಯಂದು ರಾಮೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಹೊಸ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ರಾಮೋತ್ಸವ ನಡೆಯಲಿದ್ದು, ಇದು ಮಲ್ಲಿಕಾರ್ಜುನ ನಗರಕ್ಕೆ ಮಾತ್ರವಲ್ಲ, ಇಡೀ ಮಡಿಕೇರಿ ನಗರಕ್ಕೆ ಸೀಮಿತವಾಗಿ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷವೂ ಇದೇ ರೀತಿಯಲ್ಲಿ ವಿಜೃಂಬಣೆಯ ರಾಮೋತ್ಸವವನ್ನು ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು. ಸಮಿತಿಯ ಸಲಹೆಗಾರ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ ನಗರದ ಸಾರ್ವಜನಿಕರೆಲ್ಲರೂ ಸೇರಿ ರಾಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಪರಿಕಲ್ಪನೆಯಂತೆ ಇದೊಂದು ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ನವೀನ್ ಅಂಬೆಕಲ್ ಮಾತನಾಡಿ ರಾಮೋತ್ಸವವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸೇರಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀಕೋದಂಡ ರಾಮ ದೇವಾಲಯದವರೆಗೆ ನಗರದ ಮುಖ್ಯ ಬೀದಿಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸಲಿವೆ ಎಂದು ಹೇಳಿದರು.

ಶ್ರೀ ಕೋದಂಡ ರಾಮ ಟ್ರಸ್ಟ್ ನ ಮಾಜಿ ಅಧ್ಯಕ್ಷ ಮಂಜುನಾಥ್ ಎಚ್. ಮಾತನಾಡಿ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣಗೊಂಡು ಎರಡು ವರ್ಷವಾಗಿದೆ. 35ನೇ ವರ್ಷದ ಅದ್ದೂರಿಯ ರಾಮೋತ್ಸವದೊಂದಿಗೆ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವೂ ನಡೆಯಲಿದೆ. ಶ್ರೀರಾಮನಿಗೆ ಮೇಲು, ಕೀಳೆನ್ನುವ ಭಾವನೆ ಇಲ್ಲ, ಶ್ರೀರಾಮನ ಮಾದರಿಯಲ್ಲಿ ರಾಮೋತ್ಸವವೂ ನಡೆಯಲಿದ್ದು, ಎಲ್ಲಾ ಸಮುದಾಯಗಳ ಒಗ್ಗಟ್ಟು ಇಡೀ ಜಿಲ್ಲೆಗೆ ಮಾದರಿಯಾಗಲಿದೆ ಎಂದು ತಿಳಿಸಿದರು.ಅನ್ನದಾನಕ್ಕೆ ಸಹಕಾರ ನೀಡುವ ದಾನಿಗಳು ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ (9880778047) ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಶ್ರೀ ಕೋದಂಡ ರಾಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಿತಿ ಸದಸ್ಯ ಎಚ್.ಎನ್.ನಂಜುಂಡ ಉಪಸ್ಥಿತರಿದ್ದರು.