ಸಮಗ್ರ ಅಭಿವೃದ್ಧಿಗೆ ಮುಂದಾಗುವ ಮಾದರಿ ಶಿಕ್ಷಕ

| Published : Oct 07 2024, 01:47 AM IST

ಸಾರಾಂಶ

ತಮಗೆ ದೊರೆತ ಪ್ರಶಸ್ತಿ ಹಣದ ಜೊತೆಗೆ ತಮ್ಮ ಸಂಬಳದ ಹಣದಲ್ಲೂ 1 ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿ ತಾವು ಮುಖ್ಯಶಿಕ್ಷಕರಾಗಿ ಕರ್ತವ್ಯನಿರ್ವಹಿಸುವ ಸರ್ಕಾರಿ ಶಾಲಾಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಇಲ್ಲೊಬ್ಬ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸಿದ ಶಾಲೆಗಳನ್ನು ಮಾದರಿಯತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಮಗೆ ದೊರೆತ ಪ್ರಶಸ್ತಿ ಹಣದ ಜೊತೆಗೆ ತಮ್ಮ ಸಂಬಳದ ಹಣದಲ್ಲೂ 1 ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿ ತಾವು ಮುಖ್ಯಶಿಕ್ಷಕರಾಗಿ ಕರ್ತವ್ಯನಿರ್ವಹಿಸುವ ಸರ್ಕಾರಿ ಶಾಲಾಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಇಲ್ಲೊಬ್ಬ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸಿದ ಶಾಲೆಗಳನ್ನು ಮಾದರಿಯತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.ಸದ್ಯ ಬಸಪ್ಪನದೊಡ್ಡಿ ಸರ್ಜಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕ ವೀರಪ್ಪ ಅವರು ಈ ಹಿಂದೆ ಗಡಿಯಂಚಿನ ಗೋಪಿನಾಥಂ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿ ತಮ್ಮ ಸಂಬಳದ ಹಣದಿಂದ 2 ಲಕ್ಷಕ್ಕೂ ಹಣ ವ್ಯಯಿಸಿ ಶಿಕ್ಷಣ ಇಲಾಖೆ ಗಮನ ಸೆಳೆದಿದ್ದರಲ್ಲದೆ ಇವರ ಕರ್ತವ್ಯ ನಿಷ್ಠೆ, ಪರಿಶ್ರಮಕ್ಕೆ ಅನೇಕ ಪ್ರಶಸ್ತಿಗಳು ಸಂದಿವೆ.

ಅದೇ ರೀತಿಯಲ್ಲಿ ಮಹದೇಶ್ವರ ಬೆಟ್ಟ ಸಮೀಪದ ಗೊರಸಾಣೆಯಲ್ಲೂ ಸಹ 16 ವರ್ಷ ಕರ್ತವ್ಯ ನಿರ್ವಹಿಸಿ ತಮ್ಮ ಸ್ವಂತ ಹಣದಿಂದ ಶಾಲಾಭಿವೃದ್ಧಿಗೆ ಬಳಕೆ ಮಾಡಿ ಶಾಲೆಗೊಂದು ಮೆರುಗು ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಶಸ್ತಿ ಮೂಲಕಗಳಿಂದ ಸಂದ ಹಣವನ್ನು (70 ಸಾವಿರ) ಸ್ವಂತವಾಗಿ 1 ಲಕ್ಷಕ್ಕೂ ಅಧಿಕ ಹಣವನ್ನು ಪ್ರಸ್ತುತ ಬಸಪ್ಪನದೊಡ್ಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಗೋಪಿನಾಥಂನಂತೆ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ಪಣತೊಟ್ಟಿದ್ದು ಅದಕ್ಕಾಗಿ ಅನೇಕ ದಾನಿಗಳು, ಹಳೆಯ ವಿದ್ಯಾರ್ಥಿಗಳ ಸಹಕಾರ ಕೋರಿದ ಪರಿಣಾಮ ವರ್ಷದೊಳಗೆ ಬಸಪ್ಪನದೊಡ್ಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಾದರಿ ಸರ್ಕಾರಿ ಶಾಲೆ ಎಂಬ ಹಿರಿಮೆಗೆ ಭಾಜನವಾದರೂ ಅಚ್ಚರಿಪಡುವಂತಿಲ್ಲ.

ದೊರೆತ ಪ್ರಶಸ್ತಿಗಳಿವು?: ಮುಖ್ಯ ಶಿಕ್ಷಕ ವೀರಪ್ಪ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ರಾಜ್ಯಮಟ್ಟದ ಉತ್ತಮ ಶಿಕ್ಷಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಡಮಾಡುವ ಚಿಕ್ಕವೀರಯ್ಯ ಪ್ರಶಸ್ತಿ, ಲಯನ್ಸ್ ಸೇವಾ ಸಂಸ್ಥೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ 70ಸಾವಿರಕ್ಕೂ ಅಧಿಕ ಹಣ ದೊರೆತಿದೆ. ಅಲ್ಲದೆ, ತಮ್ಮ ಸ್ವಂತ ಹಣ 1ಲಕ್ಷ ರು. ವಿನಿಯೋಗಿಸಿ ಶಾಲಾಭಿವೃದ್ಧಿಗೆ ಬಳಕೆ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಮಾತ್ರವಲ್ಲ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ದಾನಿಗಳು, ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಗೆ ಅನೇಕ ಸೌಲಭ್ಯ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದು ಸರ್ಕಾರಿ ಶಾಲಾ ಮಕ್ಕಳಿಗೆ ಅನೇಕ ಸೌಲಭ್ಯ ದೊರಕಿಸುವಲ್ಲಿ ಕಾಳಜಿ ವಹಿಸಿ ಶಿಕ್ಷಣ ಇಲಾಖೆ ಗಮನ ಸೆಳೆದಿದ್ದಾರೆ.

ಭರಪೂರ ಕೊಡುಗೆ: ದಾನಿಗಳು, ಸಂಘ ಸಂಸ್ಥೆಗಳ ಗಮನ ಸೆಳೆದು ಶಾಲಾಭಿವೃದ್ಧಿಗೆ ಭರಪೂರ ಕೊಡುಗೆ ಪಡೆಯುವಲ್ಲಿ ಮುಂದಾಗಿದ್ದು ಇವರ ಪರಿಶ್ರಮದ ಹಿನ್ನೆಲೆಯಲ್ಲಿ ಧರ್ಮಸ್ಥಳದಿಂದ 10 ಡೆಸ್ಕ್, ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಕುಡಿಯುವ ನೀರಿನ ಸೌಲಭ್ಯ, ಶಾಲೆ ಅಂದಕ್ಕಾಗಿ ಗೋಡೆ ಬರಹ, ಇತರೆ ಸೌಲಭ್ಯ ಕಲ್ಪಿಸಲು ನಂಜುಂಡರಾಜೇ ಅರಸು ಎಂಬುವರು 1.10 ಲಕ್ಷ ಕೊಡುಗೆ, ಹಳೆ ವಿದ್ಯಾರ್ಥಿಗಳಿಂದ ಯುಪಿಎಸ್, ಕಂಪ್ಟೂಟರ್ ಟೇಬಲ್, ಸಿಸಿ ಕ್ಯಾಮೆರಾ ಕೊಡುಗೆ, ಹೆಲ್ಪ್ ಎಜುಕೇಟ್ ಎ ಚೈಲ್ಡ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ವರ್ಷಕ್ಕೆ ಆಗುವ ಶಾಲಾ ಸಾಮಗ್ರಿ, ಹೆಣ್ಣು ಮಕ್ಕಳಿಗಾಗಿ ಸ್ವಚ್ಛತಾ ಕಿಟ್, 3 ಕಂಪ್ಯೂಟರ್‌, 6 ಕುರ್ಚಿ, 3 ಟೇಬಲ್ ಕೊಡುಗೆ ನೀಡಿದೆ. ಹೀಗೆ ಅನೇಕ ದಾನಿಗಳ ಸಹಕಾರದಿಂದ ಶಾಲೆ ಮಾದರಿಯತ್ತ ದಾಪುಗಾಲಿಟ್ಟಿದ್ದು, ಶಾಲಾಭಿವೃದ್ಧಿಗೆ ಮುಖ್ಯಶಿಕ್ಷಕರ ಜೊತೆ ಸಹಶಿಕ್ಷಕರಾದ ದೊರೆಸ್ವಾಮಿ, ಸೋಮಣ್ಣ, ಪುಟ್ಟರಾಮು, ಮುತ್ತಮ್ಮ, ಆನಂದ, ಸುಧಾಮಣಿ, ಮಾಲಾ ಅವರು ಸಾಥ್ ನೀಡುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ದೂರ ಸರಿದು ಖಾಸಗಿ ಶಾಲೆಯತ್ತ ಮುಖಮಾಡುವ ಪೋಷಕರು ಈ ಶಾಲೆಯತ್ತ ಧಾವಿಸಿ ಅಭಿವೃದ್ಧಿ ಮನಗಂಡರೆ ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸಬಹುದೆಂಬ ಮನೋಭಾವ ಬಾರದಿರದು.

ಅಟೆಂಡರ್ ಕೊರತೆ ನೀಗಿಸಿದ ಕಲಾಂ ಸಂಸ್ಥೆಶಾಲೆಯಲ್ಲಿ ಅಟೆಂಡರ್ ಕೊರತೆ ನೀಗಿಸುವಲ್ಲಿ ಅಬ್ದುಲ್ ಕಲಾಂ ಫೌಂಡೇಷನ್ ಯಶಸ್ವಿಯಾಗಿದೆ. ಮುಖ್ಯಶಿಕ್ಷಕರು ಸಹ ಶಿಕ್ಷಕರ ಕೋರಿಕೆ ಮೇರೆಗೆ ಕೆಲಸಕ್ಕಾಗಿ ಅಟೆಂಡರ್ ಒಬ್ಬರನ್ನು ಸಂಸ್ಥೆಯೇ ನೇಮಿಸಿ ಅವರಿಗೆ ಸಂಬಳ ನೀಡುವ ಮೂಲಕ ಶಾಲಾಭಿವೃದ್ಧಿಗೆ ಸಂಸ್ಥೆ ಕೊಡುಗೆ ನೀಡಿದೆ. ಶಾಲೆಯ ಎಲ್ಲಾ ಕೊಠಡಿಗಳಿಗೂ ದಾನಿಗಳ ಸಹಕಾರದಿಂದ ಫ್ಯಾನ್ ಅಳವಡಿಸಲಾಗಿದೆ. ಗ್ರಾಪಂ ಗಮನ ಸೆಳೆದು ಸಸ್ಯ ಶ್ಯಾಮಲ ಯೋಜನೆ ಯಶಸ್ವಿಗೊಳಿಸಿದ್ದು ಈ ಶಾಲೆಯ ಹೆಗ್ಗಳಿಕೆಯೂ ಹೌದು.

250ಕ್ಕೂ ಹೆಚ್ಚು ಗಿಡಗಳಿವೆ: ಬಸಪ್ಪನದೊಡ್ಡಿ ಸರ್ಕಾರಿ ಶಾಲೆಯಲ್ಲಿ 250ಕ್ಕೂ ಹೆಚ್ಚು ಮಹಾಘನಿ, ಕಾಡು ಬಾದಾಮಿ, ಸೀಬೆ, ಕಾಡು ನೆಲ್ಲಿ, ನುಗ್ಗೆ, ಸಪೋಟ, ತೆಂಗು, ನುಗ್ಗೆ ಸೇರಿದಂತೆ ಅನೇಕ ಬಗೆಯ ಗಿಡಗಳನ್ನು ನೆಡಲಾಗಿದೆ. ಮಂದಿನ ಸಾಲಿನಲ್ಲಿ ಆಂಗ್ಲಮಾಧ್ಯಮ ತರಗತಿ ಪ್ರಾರಂಭಿಸಿ ಈ ಗ್ರಾಮದ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎಂಬ ಧ್ಯೇಯ ನಮ್ಮದು ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಉತ್ತಮ ಪರಿಸರ ಸ್ನೇಹಿ ಶಾಲೆ: ಈ ಶಾಲೆಯಲ್ಲಿ ನೂರಾರು ಮಕ್ಕಳು ಕಲಿಯುತ್ತಿದ್ದು ಇಲ್ಲಿ ಹತ್ತಾರು ಬಗೆಯ ಗಿಡ, ಮರಗಳನ್ನು ಬೆಳೆಸಲಾಗಿದ್ದು ಉತ್ತಮ ಪರಿಸರ ಸ್ನೇಹಿ ಶಾಲೆ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ. ಅಲ್ಲದೆ ನಲಿಕಲಿ ಕಲಿಕೆಯಲ್ಲೂ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಸುಂದರ ಕೈತೋಟ, ಮಕ್ಕಳ ಆಟೋಟಕ್ಕಾಗಿ ಸಿಂಥೆಟಿಕ್ ಕ್ರೀಡಾಂಗಣ, ಶಾಲೆ ಪ್ರವೇಶಿಸುತ್ತಿದ್ದಂತೆ ಹಚ್ಚ ಹಸುರಿನಿಂದ ಕೂಡಿದ ಸುಂದರ ಪ್ರಕೃತಿಯ ಹೊದಿಕೆಯಂತೆ ಈ ಶಾಲೆ ಕಂಗೊಳಿಸುತ್ತಿದ್ದು ಶಾಲಾ ಗೋಡೆಗಳು ಉತ್ತಮ ಸುಣ್ಣ, ಬಣ್ಣಗಳಿಂದ ಮೆರುಗು ಪಡೆದುಕೊಂಡಿದ್ದು ಗಮನ ಸೆಳೆಯುವಂತಿವೆ.

ಕಂಗೊಳಿಸುವ ಗೋಡೆ ಬರಹಗಳು: ಶಾಲೆಯಲ್ಲಿದ್ದರೆ ಗುರು, ಜ್ಞಾನದ ಪಾಠ ಶುರು, ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ಅವಶ್ಯ, ನೀರು ಜೀವಜಲ, ಅದನ್ನು ಮಿತವಾಗಿ ಬಳಸಿ, ಶಿಕ್ಷಣ ಜಗತ್ತನ್ನ ಬದಲಾಯಿಸಬಲ್ಲ ಅಸ್ತ್ರ ಹೀಗೆ ಅನೇಕ ಗೋಡೆ ಬರಹಗಳು ಶಾಲೆಯಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಮಹಾನಾಯಕರ ಪೋಟೊ, ವಿವರ, ಸಾರಿಗೆ ಸಂಪರ್ಕ, ಆಹಾರ ಸರಪಳಿ ಸೇರಿದಂತೆ ಅನೇಕ ಉಪಯುಕ್ತ ಮಾಹಿತಿಗಳು ಗೋಡೆ ಬರಹದಲ್ಲಿವೆ. ಸಮುದ್ರ ಮತ್ತು ಸೌರ ಮಂಡಲದ ಪರಿಕಲ್ಪನೆ ಮೂಡುವ ಅನೇಕ ಸುಂದರ ಬರವಣಿಗೆಗಳು ಸಹ ಇಲ್ಲಿ ಗಮನ ಸೆಳೆಯುತ್ತಿವೆ.ಶಾಲೆಯನ್ನು ಸಮಗ್ರ ಅಭಿವೃದ್ಧಿಪಡಿಸಿ ಜಿಲ್ಲೆಗೆ ಮಾದರಿ ಮಾಡುವುದು ನನ್ನ ಧ್ಯೇಯ. ಅದಕ್ಕಾಗಿ ಗ್ರಾಮಸ್ಥರು, ದಾನಿಗಳು, ಶಾಲಾ ಶಿಕ್ಷಕರು ನನ್ನ ಜೊತೆ ಕೈಜೋಡಿಸಿದ್ದಾರೆ. ಮುಂದಿನ ಸಾಲಿನಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಿ ಇಂಗ್ಲೀಷ್ ಕಲಿಸುವುದು, ಹೆಚ್ಚು ಖಾಸಗಿ ಶಾಲೆಯತ್ತ ದಾಖಲಾಗುವ ಮಕ್ಕಳನ್ನು ಈ ಶಾಲೆಗೆ ಕರೆತರುವುದು ಸರ್ಕಾರಿ ಶಿಕ್ಷಕನಾದ ನನ್ನ ಜವಾಬ್ದಾರಿ.

- ವೀರಪ್ಪ, ಬಸಪ್ಪನದೊಡ್ಡಿ ಶಾಲೆ ಮುಖ್ಯಶಿಕ್ಷಕ