ಬಂಗಾರಪೇಟೆ ಪಟ್ಟಾಭಿಶೇಕೋದ್ಯಾನಕ್ಕೆ ಆಧುನಿಕ ಸ್ಪರ್ಶ

| Published : Jul 07 2025, 11:47 PM IST / Updated: Jul 07 2025, 11:48 PM IST

ಬಂಗಾರಪೇಟೆ ಪಟ್ಟಾಭಿಶೇಕೋದ್ಯಾನಕ್ಕೆ ಆಧುನಿಕ ಸ್ಪರ್ಶ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಾಭಿಶೇಕೋದ್ಯಾನವನಕ್ಕೆ ಬಂದವರಿಗೆ ಒಟ್ಟಾರೆಯಾಗಿ ಹೊಸ ಉಲ್ಲಾಸ, ಮುದಾ ನೀಡುವಂತೆ ಪುರಸಭೆ ಯೋಜನೆ ಹಾಕಿಕೊಂಡಿದೆ. ಪಟ್ಟಣದ ಮಕ್ಕಳಿಗೆ ಆಟವಾಡಲು ಮೂರು ಕಿ.ಮೀ ದೂರದ ಇಂದಿರಾ ಗಾಂಧಿ ಪಾರ್ಕ್‌ಗೆ ಹೋಗಬೇಕು, ಪಟ್ಟಾಭಿಶೇಕೋದ್ಯಾನವನದಲ್ಲೆ ಮಕ್ಕಳಿಗೆ ಹಾಗೂ ಹಿರಿಯರಿಗೆ ಎಲ್ಲ ಅನುಕೂಲ ದೊರೆತರೆ ಹೆಚ್ಚು ಉಪಯೋಗವಾಗಲಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿರುವ ಏಕೈಕ ಉದ್ಯಾನವಾದ ಪಟ್ಟಾಭಿಶೇಕೋದ್ಯಾನವನವನ್ನು ಒಂದು ಕೋಟಿ ರು.ಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ದಿಪಡಿಸಲು ಪುರಸಭೆ ಮುಂದಾಗಿದೆ.ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಾಭಿಶೇಕೋದ್ಯಾನವನದ ಜಾಗವನ್ನು ಈ ಹಿಂದೆ ಹಾಜಿ ಇಸ್ಮಾಯಿಲ್ ಸೇಠ್ ಎಂಬುದವರು ಸ್ವಾತಂತ್ರ್ಯ ಪೂರ್ವದಲ್ಲೇ ಪುರಸಭೆಗೆ ದಾನವಾಗಿ ನೀಡಿದ್ದರು. ಈ ಉದ್ಯಾವನ ಬೆಳಗ್ಗೆ ಮತ್ತು ಸಂಜೆ ವಯಸ್ಸಾದವರು, ಮಕ್ಕಳು ಕಾಲಕಳೆಯಲು ಸೂಕ್ತವಾಗಿತ್ತು, ಅಲ್ಲದೆ ಸಂಜೆ ವೇಳೆ ರೇಡಿಯೋದಲ್ಲಿ ಬರುತ್ತಿದ್ದ ವಾರ್ತೆಗಳನ್ನು ಹಾಗೂ ಹಾಡುಗಳನ್ನು ಕೇಳಲೆಂದೆ ಉದ್ಯಾವನವಕ್ಕೆ ಬರುತ್ತಿದ್ದರು.

ಉದ್ಯಾನ ಜಾಗ ಅನ್ಯ ಕೆಲಸಕ್ಕೆ ಬಳಕೆ

ಆದರೆ ಕಾಲಕ್ರಮೇಣ ಉದ್ಯಾನವನ ಜಾಗ ಒಂದು ಕಡೆ ಸರ್ಕಾರಿ ಬಾಲಕೀಯರ ಕಾಲೇಜಿಗೆ ನೀಡಲಾಯಿತು. ಮತ್ತೊಂದು ಕಡೆ ಲಯನ್ಸ್ ಭವನ, ಸಿಟಿಜನ್ ಕ್ಲಬ್, ರಂಗಂದಿರಕ್ಕೆ ನೀಡಿದ್ದರು. ಮತ್ತೊಂದು ಕಡೆ ಬೆಳಗ್ಗೆ ಸಂಜೆ ವಾಲಿಬಾಲ್ ಆಡಲು ಕೆಲವರು ಬಳಸುತ್ತಿದ್ದರು.ಇದರಿಂದ ದೊಡ್ಡ ಉದ್ಯಾನವನ ಕಿರಿದಾಗಿ ಚಿಕ್ಕ ಉದ್ಯಾನವನವಾಗಿ ಮಾರ್ಪಟ್ಟಿತ್ತು.ಇಲ್ಲಿ ಮಕ್ಕಳಿಗೆ ಆಡವಾಡಲು ಯಾವುದೇ ಸಲಕರಣಿಗಳಿಲ್ಲದೆ,ಕೂರಲೂ ಆಸನಗಳಿಲ್ಲದೆ ಅಧ್ವಾನವಾಗಿತ್ತು. ದಿನೇದಿನೆ ಉದ್ಯಾನವನಕ್ಕೆ ಸಾರ್ವಜನಿಕರು ಬರುವುದನ್ನೇ ನಿಲ್ಲಿಸಿದ್ದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೊದಲ ಬಾರಿ ಶಾಸಕರಾದಾಗ ಪಟ್ಟಾಭೀಶೇಕೋದ್ಯಾನವನಕ್ಕೆ ಹೊಸ ರೂಪ ನೀಡಿ ಮತ್ತೆ ಜನರು, ಮಕ್ಕಳು ಪಾರ್ಕ್ ಕಡೆ ಮುಖ ಮಾಡುವಂತೆ ಮಾಡಿದ್ದರು.

₹1 ಕೋಟಿ ವ್ಯಚ್ಚದಲ್ಲಿ ಅಧುನೀಕರಣ

ಇದರೊಳಗೆ ವಾಯುವಿಹಾರ ಮಾಡುವವರಿಗೆ ಟ್ಯ್ರಾಕ್ ನಿರ್ಮಾಣ, ವ್ಯಾಯಾಮ ಮಾಡಲು ಸಲಕರಣೆಗಳು ಹಾಗೂ ಮಕ್ಕಳಿಗೂ ಆಟವಾಡಲು ಹಲವು ರೀತಿಯ ಸಲಕರಣಿಗಳನ್ನು ಸ್ಥಾಪಿಸಿದ್ದರು. ಆದರೂ ಸಾರ್ವಜನಿಕರಿಂದ ಉದ್ಯಾವನವ ದೂರವೇ ಉಳಿದಿತ್ತು,ಇದನ್ನು ಗಮನಿಸಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒಂದು ಕೋಟಿ ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಿ ಸಾರ್ವಜನಿಕರನ್ನು ಪಾರ್ಕ್‌ನತ್ತ ಸೆಳೆಯಲು ಮುಂದಾಗಿದ್ದಾರೆ,

ಹಾಲಿ ಇರುವ ಮರಗಳನ್ನು ಕಡಿಯುವ ಕೆಲಸ ಸಾಗಿದ್ದು, ಒಂದು ತಿಂಗಳಲ್ಲಿ ಪಾರ್ಕ್‌ಗೆ ಹೊಸ ರೂಪ ನೀಡುವ ಕಾಮಗಾರಿ ಆರಂಭವಾಗಲಿದೆ.ಪಾರ್ಕ್ ಎಂದರೆ ಬರೀ ಜನರು ಬಂದು ಕೂರುವುದಕ್ಕೆ ಮಕ್ಕಳು ಆಟವಾಡಲಿಕ್ಕೆ ಸೀಮಿತವಾಗದೆ ನಮ್ಮ ಗ್ರಾಮೀಣ ಭಾಗದ ಸೊಗಡನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಹಳೇ ಕಾಲದ ಎತ್ತಿನ ಬಂಡಿ, ರೈತರು ಹೊಲದಲ್ಲಿ ಕೆಲಸ ಮಾಡುವುದು,ನೇಗಿಲು,ರೈತರ ಸಲಕರಣಿಗಳನ್ನು ಉದ್ಯಾನವನದಲ್ಲಿ ಸ್ಥಾಪಿಸಲಾಗುವುದು.

ಮಕ್ಕಳಿಗೆ, ಹಿರಿಯರಿಗೆ ಅನುಕೂಲ

ಬೆಳಗ್ಗೆ ಸಂಜೆ ಇಲ್ಲಿಗೆ ಬಂದವರಿಗೆ ಒಟ್ಟಾರೆಯಾಗಿ ಹೊಸ ಉಲ್ಲಾಸ, ಮುದಾ ನೀಡುವಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ಮಕ್ಕಳಿಗೆ ಆಟವಾಡಲು ಮೂರು ಕಿ.ಮೀ ದೂರದ ಇಂದಿರಾ ಗಾಂಧಿ ಪಾರ್ಕ್‌ಗೆ ಹೋಗಬೇಕು, ಪಟ್ಟಾಭಿಶೇಕೋದ್ಯಾನವನದಲ್ಲೆ ಮಕ್ಕಳಿಗೆ ಹಾಗೂ ಹಿರಿಯರಿಗೆ ಎಲ್ಲ ಅನುಕೂಲ ದೊರೆತರೆ ಹೆಚ್ಚು ಉಪಯೋಗವಾಗಲಿದೆ.