ಸಾರಾಂಶ
ನರಗುಂದ: ತಾಲೂಕಿನ ಜನತೆ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಇಂಥ ಸಮಯದಲ್ಲಿ ದಿನೇ ದಿನೇ ಮಂಗನ ಕಾಯಿಲೆಯ ವೈರಸ್ ಹೆಚ್ಚಾಗುತ್ತಿರುವುದರಿಂದ ಜನತೆ ಭಯ ಭೀತರಾಗಿದ್ದಾರೆ.
ಪ್ರತಿ ವರ್ಷ ಬೇಸಿಗೆ ಪ್ರಾರಂಭವಾಯಿತ್ತೆಂದರೆ ಈ ರೋಗ ಸ್ವಾಭಾವಿಕವಾಗಿ ತನ್ನಿಂದ ತಾನೇ ಹೆಚ್ಚಾಗುತ್ತದೆ, ಆದರೆ ಈ ವರ್ಷ ತಾಲೂಕಿನಲ್ಲಿ ಕಾಯಿಲೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರಿಗೂ ಅಂಟುತ್ತಿರುವುದರಿಂದ ಆರೋಗ್ಯ ಇಲಾಖೆಗೆ ಈ ವೈರಸ್ ರೋಗವನ್ನು ನಿಯಂತ್ರಣ ಮಾಡುವುದು ವೈದ್ಯರಿಗೆ ಸವಾಲಿನ ಕೆಲಸವಾಗಿದೆ.ರೋಗದ ಲಕ್ಷಣಗಳು: ಜ್ವರ, ಆಹಾರ ನುಂಗಲು ತೊಂದರೆ, ಗಂಟಲ ನೋವು, ಮನುಷ್ಯನ ಎರಡು ಭಾಗದ ಕಪಾಳ ಭಾವು ಕಂಡುಬರುವುದು ಕಾಯಿಲೆಯ ಲಕ್ಷಣಗಳಾಗಿವೆ. ಮೇಲಾಗಿ ಈ ಮಂಗನ ಕಾಯಿಲೆ ಹೆಚ್ಚು ಮಕ್ಕಳಲ್ಲಿ ಕಂಡು ಬರುತ್ತದೆ.
ಈ ಕಾಯಿಲೆಗೆ ಸೀಮಿತವಾಗಿ ಔಷಧ ಇರುವುದಿಲ್ಲ, ಈ ರೋಗದ ಲಕ್ಷಣಗಳಾದ ಜ್ವರ, ಗಂಟಲ ನೋವು ಕಡಿಮೆ ಮಾಡುವ ಮಾತ್ರೆ, ಇಂಜೆಕ್ಷನ್ ರೋಗಿಗಳಿಗೆ ನೀಡಿ ಈ ರೋಗ ನಿಯಂತ್ರಣ ಮಾಡಲಾಗುವುದೆಂದು ವೈದ್ಯರು ಹೇಳುವರು.280 ರೋಗಿಗಳು ಗುಣಮುಖ: ಜನವರಿಯಿಂದ ಫೆ. 27ವರೆಗೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಈವರೆಗೆ 280 ಮಂಗನ ಕಾಯಿಲೆ ರೋಗಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ 70ರಿಂದ 80 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಈ ರೋಗದಿಂದ ತೊಂದರೆ ಅನುಭವಿಸಿದ್ದೇನೆ, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಹೋದರೆ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಸಿಗದೆ ತೊಂದರೆ ಅನುಭವಿಸಿದ್ದೇನೆಂದು ಚಿಕ್ಕನರಗುಂದ ಗ್ರಾಮದ ಮಂಗನ ಕಾಯಿಲೆ ರೋಗಿ ಶ್ರೀಶೈಲ ಹೊಸಮನಿ ಹೇಳಿದರು.ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಮ್ಮ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಗೆ ಮಂಗನ ಕಾಯಿಲೆ ರೋಗವನ್ನು ನಿರ್ಲಕ್ಷ್ಯ ಮಾಡದೇ ಈ ರೋಗಿಗಳಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ತಿಳಿಸಿದ್ದೇನೆ. ಮೇಲಾಗಿ ನಾನು ಕೂಡ ದಿನ ನಿತ್ಯದ ಪ್ರಕರಣಗಳ ಬಗ್ಗೆ ನಿಗಾವಹಿಸಿದ್ದೇನೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರೇಣುಕಾ ಕೊರವನವರ ಹೇಳಿದರು.