ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಹೆರಿಗೆ ನೋವು ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದಾಗ 108 ಆ್ಯಂಬುಲೆನ್ಸ್‌ನಲ್ಲೇ ತಾಯಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.ತಾಲೂಕಿನ ವರದಾಹಳ್ಳಿ ಗ್ರಾಮದ ಲಕ್ಷ್ಮೀ ಬಾರ್ಕಿ ಆ್ಯಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಗುರುವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬದವರು 108 ವಾಹನಕ್ಕೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ತೆರಳಿ ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದಾಗ ನೋವು ಜಾಸ್ತಿಯಾಗಿದೆ. ತಕ್ಷಣ 108 ಸಿಬ್ಬಂದಿ ವೆಂಕಟೇಶ, ತೌಫೀಕ್ ಪಠಾಣ ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ಕರೆತಂದು ವಾರ್ಡಿಗೆ ಸೇರಿಸಿದ್ದಾರೆ. ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಲಂಚ ನೀಡಲು ಬಂದ ಗುತ್ತಿಗೆದಾರನನ್ನೇ ಲೋಕಾ ಬಲೆಗೆ ಬೀಳಿಸಿದ ಅಧಿಕಾರಿ:ಸರ್ಕಾರಿ ನೌಕರರು ಲಂಚ ಪಡೆದು ಸಿಕ್ಕಿಬೀಳುವುದು ಸಾಮಾನ್ಯ ಸಂಗತಿ. ಆದರೆ, ಲಂಚ ನೀಡಲು ಬಂದ ವ್ಯಕ್ತಿಯನ್ನೇ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬೀಳಿಸಿದ ಘಟನೆ ಗುರುವಾರ ಹಾವೇರಿ ನಗರದಲ್ಲಿ ನಡೆದಿದೆ.ತಾಲೂಕಿನ ಗುತ್ತಲದ ಗುರುಕೃಪಾ ಎಂಟರ್‌ಪ್ರೈಸಸ್ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್ ಬಂಧಿತ ವ್ಯಕ್ತಿ. ಇವರ ವಿರುದ್ಧ ಹಾವೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್ ಹೆಗಡೆ ದೂರು ಕೊಟ್ಟಿದ್ದರು.ಹಾವೇರಿ ತಾಪಂನಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್‌ನಲ್ಲಿ ಶರಣಪ್ಪ ಅವರು ಈ ಟೆಂಡರ್ ನನಗೇ ಸಿಗುವಂತೆ ಮಾಡಿದರೆ ಟೆಂಡರ್ ಮೊತ್ತದ ಶೇ. 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾಯಿಸಿ, ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರು ಎಂದು ಇಒ ಭರತ್ ಹೆಗಡೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.₹ 2 ಲಕ್ಷವನ್ನು ಮುಂಗಡವಾಗಿ ನೀಡುವುದಾಗಿ ಹೇಳಿ ನಗರದ ಖಾಸಗಿ ಹೋಟೆಲ್‌ನಲ್ಲಿ ₹ 99 ಸಾವಿರ ಲಂಚ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪ್ರಕರಣಗಳಲ್ಲಿ ಇದು ವಿರಳ ಘಟನೆ ಎಂದು ಹೇಳಲಾಗುತ್ತಿದೆ. ಇದನ್ನು ರಿವರ್ಸ್ ಟ್ರ್ಯಾಪ್ ಎನ್ನುತ್ತೇವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ತಿಳಿಸಿದ್ದಾರೆ.