ಸಾರಾಂಶ
ಮಕ್ಕಳ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಕಾರಣಕ್ಕೂಪೋಷಕರು ಮಕ್ಕಳ ಮುಂದೆ ಜಗಳವಾಡಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಬೇಕು. ಆಗ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಮಕ್ಕಳಲ್ಲಿಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳು ಬೆಳೆಸಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮನೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುಡಿಯುತ್ತಾಳೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಹೋರಾಟ ಮಾಡುತ್ತಾಳೆ. ಮಕ್ಕಳನ್ನು ತಾಯಿ ಸರಿಯಾಗಿ ಗಮನಿಸಿದರೆ ಮಾತ್ರ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ತಿಳಿಸಿದರು.ತಾಲ್ಲೂಕಿನ ಮಂಚನಬಲೆ ಗ್ರಾಮದ ಬಳಿಯ ಬಿಜಿಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಕಾರಣಕ್ಕೂಪೋಷಕರು ಮಕ್ಕಳ ಮುಂದೆ ಜಗಳವಾಡಬಾರದು ಎಂದು ಸಲಹೆ ನೀಡಿದರು. ಮಕ್ಕಳ ವ್ಯಕ್ತಿತ್ವ ರೂಪಿಸಬೇಕುಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ಎಲ್ಲಾ ಶಾಲೆಗಳಂತೆ ನಮ್ಮ ಶಾಲೆ ಕೇವಲ ಅಂಕಪಟ್ಟಿ ವಿತರಿಸುವ ಸಂಸ್ಥೆಯಾಗಿಲ್ಲ. ನಾವು ಮಕ್ಕಳಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸ್ವ-ಕೌಶಲದಿಂದ ಜೀವನವನ್ನು ಅತ್ಯಂತ ಸುಂದರವಾಗಿ ನಡೆಸುವ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಬೋರಯ್ಯ ಮಾತನಾಡಿ, ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಟವಿದೆ. ಇಂತಹದ್ದರ ನಡುವೆ ಇಲ್ಲಿ ಮಕ್ಕಳಿಗೆ ಊಟ ಬಡಿಸುವಾಗ ಯಾರೂ ಸಹ ಜಾತಿ, ಧರ್ಮವನ್ನು ಕೇಳಲಿಲ್ಲ. ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳು ಬೆಳೆಸಬೇಕು ಎಂದರು.ಮಕ್ಕಳಿಗೆ ತಾಯಂದಿರ ಕೈತುತ್ತು
ಮಕ್ಕಳಿಗಾಗಿ ಪೋಷಕರು ಪುಲಾವ್, ಹೋಳಿಗೆ, ಕೇಸರಿ ಬಾತ್,ರವೆ ಉಂಡೆ, ಲಾಡು, ಉಪ್ಪಿಟ್ಟು,ಅಕ್ಕಿ ರೊಟ್ಟಿ,ರಾಗಿ ರೊಟ್ಟಿ,ಜೋಳದ ರೊಟ್ಟಿ, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್, ರಸಂ ಸೇರಿದಂತೆ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಬಂದಿದ್ದರು. ಮಾತೃ ಭೋಜನ’ದಲ್ಲಿ ವಿದ್ಯಾರ್ಥಿಗಳು ತಾಯಂದಿರ ಕೈ ತುತ್ತು ಸವಿದರು.ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮದ ಅತಿಥಿಗಳೊಂದಿಗೆ ಪಂಕ್ತಿ ಭೋಜನ ಮಾಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.
ಈ ವೇಳೆ ಬಿಜಿಎಸ್ ಐಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ ಮೂರ್ತಿ, ಬಿಜಿಎಸ್ ವರ್ಲ್ಡ್ ಸ್ಕೂಲ್ ಪ್ರಾಂಶುಪಾಲೆ ದೀಪಿಕಾಶರ್ಮಾ, ಮೇಳೆಕೊಟೆ ಪ್ರಾಂಶುಪಾಲ ವಿಜಯ್ ಕುಮಾರ್, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಮಂಚನಬಲೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಮಧು, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಹರೀಶ್, ಸಿಎಸ್ ಎನ್ ರಮೇಶ್ ಮತ್ತಿತರರು ಇದ್ದರು.