26ಕ್ಕೆ ಎರಡು ಕೋಟಿ ಈಡುಗಾಯಿ ಒಡೆಯುವ ಚಳವಳಿ

| Published : Apr 12 2025, 12:47 AM IST

ಸಾರಾಂಶ

ಸಾಮಾನ್ಯವಾಗಿ ಹರಕೆಗಳಿಗೆ ಈಡೇರಿಕಾಗಿ, ಈಡೇರಿದ್ದಕ್ಕಾಗಿ ಈಡುಗಾಯಿ ಒಡೆಯುತ್ತಾರೆ. ಆದರೆ ಕನ್ನಡ ಚಳವಳಿ ವಾಟಾಳ್‌ ಪಕ್ಷ ಜನತೆಯ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಈಡುಕಾಯಿ ಒಡೆಯುವ ವಿನೂತನ ಚಳವಳಿ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದೆ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ-ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ಹಾಗೂ ಜನತೆಯ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.೨೬ ರಂದು ರಾಜ್ಯಾದ್ಯಂತ ಎರಡು ಕೋಟಿ ಈಡುಗಾಯಿ ಒಡೆಯುವ ಚಳವಳಿ ನಡೆಸುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯವಾಗಿ ಹರಕೆಗಳಿಗೆ ಈಡೇರಿಕಾಗಿ, ಈಡೇರಿದ್ದಕ್ಕಾಗಿ ಈಡುಗಾಯಿ ಒಡೆಯುತ್ತಾರೆ. ನಾವು ಜನತೆಯ ಬೇಡಿಕೆಗಳ ಈಡೇರಿಕೆಗಾಗಿ ಈಡುಕಾಯಿ ಹೊಡೆಯುವ ವಿನೂತನ ಚಳವಳಿ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಶಿಕ್ಷಣ ದರ, ಬಸ್ ದರ, ಹಾಲುದರ, ಮೆಟ್ರೋ ದರ, ವಿದ್ಯುತ್ ದರ, ನೀರಿನ ದರ, ಗ್ಯಾಸ್ ದರ, ಪೆಟ್ರೋಲ್ ಡೀಸೆಲ್ ದರಗಳು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಳೆ ಏರಿಕೆಯಲ್ಲಿ ಪೈಪೋಟಿ ನಡೆಸುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೆ ಇಲಾಖೆಗಳು ಪರಭಾಷಿಕರ ಹಿಡಿತಕ್ಕೆ ಸಿಲುಕಿದೆ. ಕನ್ನಡಿಗರ ಕಣ್ಣೀರಿನ ಕಥೆ ಕೇಳುವವರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪರಭಾಷಿಕರ ದಬ್ಬಳಿಕೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಂಗಳೂರನ್ನು ವಿಭಜಿಸಿ ಪರಭಾಷಿಕರನ್ನು ಮೇಯರ್‌ಗಳನ್ನಾಗಿ ಮಾಡುವ ಹುನ್ನಾರಗಳು ತೆರೆಯ ಹಿಂದೆ ನಡೆಯುತ್ತಿದೆ. ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರು ಕಟ್ಟಿರುವುದನ್ನು ವಿಭಜಿಸಲು ಅವಕಾಶ ನೀಡಬಾರದು. ಕೆರೆ, ಕಟ್ಟೆಗಳನ್ನು ನುಂಗಿ ನೀರು ಕುಡಿದು ಈಗ ಬೆಂಗಳೂರು ನಾಳೆ ಕರ್ನಾಟಕವನ್ನೇ ವಿಭಜಿಸಲು ಮುಂದಾದರೂ ಆಶ್ಚರ್ಯಪಡಬೇಕಿಲ್ಲ ಎಂದರು.

ರಾಜ್ಯದ ಶಾಸನದ ಸಭೆಗಳಲ್ಲಿ ಕನ್ನಡಿಗರ ಜ್ವಲಂತ ಸಮಸ್ಯೆಗಳಿದ್ದರೂ ಬಗೆಹರಿಸಲು ಧ್ವನಿ ಎತ್ತಬೇಕೆಂಬ ಪ್ರಾಮಾಣಿಕ ಚಿಂತನೆಯೇ ಇಲ್ಲವಾಗಿದೆ, ಲೋಕಸಭೆಯಲ್ಲಿ ನಮ್ಮವರೂ ಪರಿಣಾಮಕಾರಿಯಾಗಿ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲದೆ ನಿರುದ್ಯೋಗ ತಾಂಡವಾಡುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾದ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಂತಾಗಿದೆ ಎಂದರು.

ಭಾಷವಾರು ಪ್ರಾಂತ್ಯಗಳ ವಿಂಗಡಣೆಯಲ್ಲಿ ಕರ್ನಾಟಕಕ್ಕೆ ವಂಚನೆಯಾಗಿರುವುದು ಮಹಾಜನ್ ವರದಿಯಲ್ಲಿ ಸ್ಪಷ್ಟವಾಗಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು, ಮರಾಠಿಗರ ಮತ್ತು ತಮಿಳಿಗರ ದಬ್ಬಾಳಿಕೆ ವಿರುದ್ದ ಹೋರಾಟಗಳು ಅನಿವಾರ್ಯವಾಗಿದ್ದು, ಮಹಾರಾಷ್ಟ್ರದ ಏಕೀಕರಣ ಸಮಿತಿ ಕರ್ನಾಟಕದಲ್ಲಿ ನಿಷೇಧಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡ ಅ.ಕೃ.ಸೋಮಶೇಖರ್, ಕರವೇ ರಾಜ್ಯ ಸಂಚಾಲಕ ಜಯದೇವ ಪ್ರಸನ್ನ, ಮುಖಂಡರಾದ ಕನ್ನಡದ ವೆಂಕಟಪ್ಪ, ಎಪಿಎಂಸಿ ಪುಟ್ಟರಾಜು, ಪಾರ್ಥ, ಮುಬಾರಕ್ ಇದ್ದರು.