ಸಾರಾಂಶ
ಅಸ್ಪೃಶ್ಯತೆ ನಿವಾರಣೆ, ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ,ಸ್ತ್ರೀ ಸಮಾನತೆ, ಲಿಂಗ ಸಮಾನತೆ, ಕಂದಾಚಾರ ವಿರುದ್ಧ ಹೋರಾಟ. ಮೌಢ್ಯ ಗಳ ಬಗ್ಗೆ ಜಾಗೃತಿ, ಶ್ರಮದ ಹಂಚಿಕೆಗಾಗಿ ಕಾಯಕದ ಕಲ್ಪನೆ, ಸಂಪತ್ತಿನ ವಿತರಣೆಗಾಗಿ ದಾಸೋಹದ ಕಲ್ಪನೆ, ಜಾತಿ ನಿರ್ಮೂಲನೆಗಾಗಿ ಸರ್ವರಿಗೂ ಇಷ್ಟಲಿಂಗ ಧಾರಣೆ, ಇಂತಹ ಹತ್ತಾರು ಆಯಾಮಗಳಲ್ಲಿ ಅವರು ಬಹು ದೊಡ್ಡ ಚಳವಳಿಯನ್ನೇ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಸೊರಬ
ಬಸವೇಶ್ವರರು ಧರೆಗೆ ಅವತರಿಸಿ ಬಂದದ್ದೇ ಭಗವಂತನ ಆಜ್ಞೆಯ ಮೇರೆಗೆ. ಪರಮಾತ್ಮನ ಕಾರ್ಯಗಳ ಆತನ ಪ್ರತಿನಿಧಿಯಾಗಿ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಮಾಡಿದರು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಶನಿವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಆಯೋಜಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಬಸವಣ್ಣನವರು ಕೇವಲ ಸಮಾಜ ಸುಧಾರಣೆ ಮಾಡಲಿಲ್ಲ. ಅವರು ಬಹು ಆಯಾಮದ ಕ್ರಾಂತಿಯನ್ನೇ ಮಾಡಿದರು. ಅಸ್ಪೃಶ್ಯತೆ ನಿವಾರಣೆ, ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ,ಸ್ತ್ರೀ ಸಮಾನತೆ, ಲಿಂಗ ಸಮಾನತೆ, ಕಂದಾಚಾರ ವಿರುದ್ಧ ಹೋರಾಟ. ಮೌಢ್ಯ ಗಳ ಬಗ್ಗೆ ಜಾಗೃತಿ, ಶ್ರಮದ ಹಂಚಿಕೆಗಾಗಿ ಕಾಯಕದ ಕಲ್ಪನೆ, ಸಂಪತ್ತಿನ ವಿತರಣೆಗಾಗಿ ದಾಸೋಹದ ಕಲ್ಪನೆ, ಜಾತಿ ನಿರ್ಮೂಲನೆಗಾಗಿ ಸರ್ವರಿಗೂ ಇಷ್ಟಲಿಂಗ ಧಾರಣೆ, ಇಂತಹ ಹತ್ತಾರು ಆಯಾಮಗಳಲ್ಲಿ ಅವರು ಬಹು ದೊಡ್ಡ ಚಳವಳಿಯನ್ನೇ ಮಾಡಿದ್ದಾರೆ ಎಂದರು.
ಬಸವಣ್ಣ ನವರು ಬಹುಶಃ ಜನ್ಮ ಎತ್ತದೆ ಹೋಗಿದ್ದರೆ ಈಗಿನ ಕಾಲಘಟ್ಟ ಇನ್ನೂ ನೂರಾರು ವರ್ಷಗಳಷ್ಟು ಹಿಂದೆಯೇ ಹೋಗುತ್ತಿತ್ತು. ಇಂದು ನಾವೆಲ್ಲಾ ಸುಖವಾಗಿದ್ದೇವೆ ಎಂದರೆ ನಮ್ಮ ಪೂರ್ವಜರು ಮಾಡಿದ ಪುಣ್ಯದ ಫಲವಾಗಿಯೇ ಹೊರತು ಇದರಲ್ಲಿ ಬೇರಾವ ಚಮತ್ಕಾರವಿಲ್ಲ. ಎಲ್ಲರೂ ಬಸವಣ್ಣನವರ ಆದರ್ಶಗಳಲ್ಲಿ ಒಂದಾದರೂ ಅಳವಡಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಲು ಕರೆನೀಡಿದರು.ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ. ಈರೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ಬಸವಣ್ಣನವರ ತತ್ವಗಳನ್ನು ಶಾಶ್ವತಗೊಳಿಸಲು ಬಸವ ಪುತ್ಥಳಿ ನಿರ್ಮಾಣ ನಡೆದಿದೆ. ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಮಾನಗಳಲ್ಲಿ ಅದರ ಉದ್ಘಾಟನಾ ಕಾರ್ಯ ನಡೆಯಲಿದೆ ಎಂದರು.
ಪುರಸಭಾ ಸದಸ್ಯ ಮಧುರಾಯ ಜಿ. ಶೇಟ್, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು. ಪುರಸಭಾ ಸದಸ್ಯ ನಟರಾಜ ಉಪ್ಪಿನ, ವೀರಶೇವ ಸಮಾಜದ ಮುಖಂಡರಾದ ಲಿಂಗರಾಜ ದೂಪದ, ನಿಜಗುಣ ಚಂದ್ರಶೇಖರ, ಶಿವಯೋಗಿ ದೂಪದ, ನಾಗರಾಜ ಗುತ್ತಿ ಇತರರಿದ್ದರು.