ಬ್ಯಾಡಗಿಯಲ್ಲಿ ಮೆಣಸಿನಕಾಯಿ ವಹಿವಾಟಿಗೆ ಅಡ್ಡಗಾಲಾದ ಕಿರಿದಾದ ರಸ್ತೆ

| Published : Mar 24 2025, 12:37 AM IST

ಬ್ಯಾಡಗಿಯಲ್ಲಿ ಮೆಣಸಿನಕಾಯಿ ವಹಿವಾಟಿಗೆ ಅಡ್ಡಗಾಲಾದ ಕಿರಿದಾದ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಆಯಾಮಗಳಿಂದ ಸರ್ಕಾರಕ್ಕೆ ಆದಾಯ ನೀಡುತ್ತಿರುವ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೂಲ ಸೌಕರ್ಯಗಳಿಲ್ಲದೇ ಅಕ್ಷರಶಃ ನಲುಗುತ್ತಿದೆ.

ಶಿವಾನಂದ ಮಲ್ಲನಗೌಡ್ರ

ಬ್ಯಾಡಗಿ: ಮಾರುಕಟ್ಟೆಯನ್ನು ಸಂಪರ್ಕಿಸುವಂತಹ ರಸ್ತೆಗಳು ಮೆಣಸಿನಕಾಯಿ ವಹಿವಾಟು ಅಭಿವೃದ್ಧಿಗೆ ಅಡ್ಡಿಗಾಲಾಗಿವೆ. ರೈತರ ಅನುಕೂಲಕ್ಕೆ ಪಟ್ಟಣದ ಮುಖ್ಯರಸ್ತೆ ಅಗಲೀಕರಣವಾಗಬೇಕಾಗಿದೆ ಎಂಬ ಕೂಗು ಬಹಳ ವರ್ಷದಿಂದ ಕೇಳಿ ಬರುತ್ತಿದೆ. ಆದರೆ ಇದೀಗ ಹತ್ತಾರು ಕೋಲ್ಡ್ ಸ್ಟೋರೇಜ್ ಹಾಗೂ ಪೌಡರ್ ಫ್ಯಾಕ್ಟರಿ ಸೇರಿದಂತೆ ಬಹುತೇಕ ಖರೀದಿದಾರರು ಇರುವ ಮಲ್ಲೂರವರೆಗಿನ ರಸ್ತೆ ಕೇವಲ 20 ಅಡಿಗಳಷ್ಟೇ ಅಗಲವಿದ್ದು, ಅಗಲೀಕರಣವಾಗಬೇಕಾಗಿರುವ ರಸ್ತೆಗಳ ಸಾಲಿಗೆ ಇದೀಗ ಸೇರ್ಪಡೆಯಾಗಿದೆ.

ವಿವಿಧ ಆಯಾಮಗಳಿಂದ ಸರ್ಕಾರಕ್ಕೆ ಆದಾಯ ನೀಡುತ್ತಿರುವ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೂಲ ಸೌಕರ್ಯಗಳಿಲ್ಲದೇ ಅಕ್ಷರಶಃ ನಲುಗುತ್ತಿದೆ. ಕೈಗಾರಿಕೆ ಹಾಗೂ ಉದ್ಯಮಗಳ ಬೆಳವಣಿಗೆಗೆ ರಸ್ತೆಗಳು ಬಹಳಷ್ಟು ಅವಶ್ಯ ಎಂಬುದು ಕಟುವಾಸ್ತವ. ಹೊಸದಾಗಿ ನಿರ್ಮಿಸಿರುವ ಕೈಗಾರಿಕೆ ವಸಾಹತುಗಳನ್ನು ಒಮ್ಮೆ ನೋಡಿ ಬಂದರೆ ಇದರ ಅನುಭವ ಎಲ್ಲರಿಗೂ ಸಿಗುತ್ತದೆ. ಅಲ್ಲಿಯೂ ಕನಿಷ್ಠ 80 ಅಡಿ ರಸ್ತೆ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿನ ಮಾರುಕಟ್ಟೆಯಿಂದ ಮಲ್ಲೂರಿಗೆ ಸಂಪರ್ಕಿಸುವ ಸುಮಾರು 5 ಕಿಮೀ ರಸ್ತೆಯ ಅಗಲ ಕೇವಲ 20 ಅಡಿಗಳಿಷ್ಟಿದೆ. ಹಾಗಿದ್ದರೆ ಮೆಣಸಿನಕಾಯಿ ವ್ಯಾಪಾರ, ವಹಿವಾಟಿಗೆ ಅಗಲವಾದ ರಸ್ತೆಗಳು ಅವಶ್ಯವಿಲ್ಲವೇ ಎಂಬುದು ವರ್ತಕರ ಪ್ರಶ್ನೆ.

ಕಣ್ಣೀರಿಡುತ್ತಿರುವ ವಾಹನ ಸವಾರರು: ಈ ರಸ್ತೆ ಹಳೇ ಪುರಸಭೆಯಿಂದ ಮಾರುಕಟ್ಟೆ ಹಿಂಭಾಗ ಸೇರಿದಂತೆ ಮಲ್ಲೂರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶವನ್ನು ಸಂಪರ್ಕಿಸುತ್ತದೆ. ಆದರೆ ಇಲ್ಲಿರುವ ರಸ್ತೆ ಅಗಲ ಮಾತ್ರ 20 ಅಡಿ. ಹಾಗಾದರೆ ಇಷ್ಟೊಂದು ಬಹುದೊಡ್ಡ ಮಾರುಕಟ್ಟೆಗೆ ಈ ರಸ್ತೆ ಸಾಕಾಗಲಿದೆಯೇ? ನಿತ್ಯವೂ ಲಕ್ಷಗಟ್ಟಲೇ ಚೀಲಗಳನ್ನು ಸಾಗಿಸುತ್ತಿರುವ ಟಾಟಾ ಏಸ್ ಚಾಲಕರಂತೂ ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಇನ್ನೂ ಭಾರಿ ವಾಹನಗಳ ಗೋಳಂತೂ ಹೇಳತೀರದು. ಹೀಗಾಗಿ ಹಮಾಲರ ನಡುವೆ ನಿತ್ಯವೂ ಜಗಳ ತಪ್ಪಿದ್ದಲ್ಲ.

ಕಣ್ಣಿದ್ದೂ ಕುರುಡರು: ರಸ್ತೆ ಅಗಲೀಕರಣ ಆಗಲೇಬೇಕೆಂಬ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಈ ರಸ್ತೆಯಲ್ಲಿರುವ ಕಟ್ಟಡಗಳ ತೆರಿಗೆ ಕಟ್ಟಿಸಿಕೊಂಡು ತಿಂದು ತೇಗುತ್ತಿರುವ ಪುರಸಭೆ, ಕೋಟಿಗಟ್ಟಲೇ ಸೆಸ್ ತುಂಬಿಸಿಕೊಂಡು ಮಾರುಕಟ್ಟೆ ಪ್ರಾಂಗಣವಷ್ಟೇ ನಮ್ಮ ವ್ಯಾಪ್ತಿ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಎಪಿಎಂಸಿ ಇವರೆಲ್ಲರನ್ನೂ ನಿಭಾಯಿಸುತ್ತಿರುವ ಜಿಲ್ಲಾಡಳಿತ ಇವರೆಲ್ಲರ ಸಾರ್ವಜನಿಕ ಕಾಳಜಿಗೆ ಶಹಭಾಸ್‌ಗಿರಿ ನೀಡಲೇಬೇಕು.

ಅನಾಥ ಶವವಾಗುತ್ತಿದೆಯೇ?: ಅಭಿವೃದ್ಧಿ ವಿಚಾರದಲ್ಲಿ ಬ್ಯಾಡಗಿ ಮಾರುಕಟ್ಟೆ ಪ್ರಾಂಗಣ ಮಾತ್ರ ಅನಾಥ ಶವವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿವೆ. ಇನ್ನು ಕೋಟಿಗಟ್ಟಲೇ ತೆರಿಗೆ ಕಟ್ಟುತ್ತಿರುವ ಇಲ್ಲಿರುವ ವರ್ತಕರು ಹಾಗೂ ಉದ್ಯಮಿಗಳಂತೂ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬ ಮನಸ್ಥಿತಿ. ಹೀಗಾಗಿ ಕೂಲಿ ಕಾರ್ಮಿಕರು, ರೈತರ ಗೋಳು ಕೇಳುವರು ಯಾರು ಇಲ್ಲದಂತಾಗಿದೆ.ಬಹಿಷ್ಕಾರ:

ಪೌಡರ್ ಫ್ಯಾಕ್ಟರಿ ಸೇರಿದಂತೆ 2 ಲಕ್ಷ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಹೊಂದಿದ್ದೇನೆ. ಆದಾಯ ತೆರಿಗೆ ಸೇರಿದಂತೆ ಎಲ್ಲ ರೀತಿಯಿಂದ ಸುಮಾರು ₹2 ಕೋಟಿಗೂ ಅಧಿಕ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇನೆ. ಆದರೆ ಇಲ್ಲಿರುವ ಸಮಸ್ಯೆಗಳಿಂದ ನಾನು ಹೊರತಾಗಿಲ್ಲ. ಸರ್ಕಾರ ಸೇರಿದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಇಲ್ಲಿರುವ ಎಲ್ಲ ವರ್ತಕರು ಜಿಎಸ್‌ಟಿ, ಸೆಸ್ , ಕಟ್ಟಡ ತೆರಿಗೆ ಸೇರಿದಂತೆ ಯಾವುದೇ ರೀತಿಯ ತೆರಿಗೆ ಕಟ್ಟವುದನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕಾಗುತ್ತದೆ ಎಂದು ಪುರಸಭೆ ಸದಸ್ಯ ಹಾಗೂ ವರ್ತಕರಾದ ಬಸವರಾಜ ಛತ್ರದ ತಿಳಿಸಿದರು.

ಮೂಲ ಸೌಕರ್ಯ: ಲಕ್ಷಾಂತರ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಅವರ ಬದುಕನ್ನು ಕಟ್ಟಿಕೊಟ್ಟಿದ್ದೇವೆ. ಆದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಬಂದು ನಮಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡಲು ಮುಂದಾಗುತ್ತಿಲ್ಲ ಎಂದು ಉದ್ಯಮಿ ಬಸವರಾಜ ಸುಂಕಾಪುರ ತಿಳಿಸಿದರು.